ಬಿಜೆಪಿ- ಕೆಜೆಪಿ ನಿರ್ದೇಶಕರ ನಡುವೆ ಪೈಪೋಟಿ
ಚಿಂಚೋಳಿ: ತಾಲೂಕು ಎಪಿಎಂಸಿ 2ನೇ ಅವಧಿಗಾಗಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ- ಕೆಜೆಪಿ ನಿರ್ದೇಶಕರ ಮಧ್ಯೆ ಪೈಪೋಟಿ ನಡೆಯುತ್ತಿದೆ.
ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಒಟ್ಟು ನಿರ್ದೇಶಕರ ಸಂಖ್ಯೆ 16 ಇದ್ದು ಇವುಗಳಲ್ಲಿ 3ಜನ ನಿರ್ದೇಶಕರನ್ನು ಸರ್ಕಾರದಿಂದ ನಾಮನಿರ್ದೇಶನ ಮಾಡಲಾಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ ಕರ್ನಾಟಕ ಜನತಾ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಸ್ಥಳೀಯ ಶಾಸಕ ಸುನೀಲ್ ವಲ್ಯಾಪುರೆ ಅವರ ಬೆಂಬಲಿಗರಾದ ಗೋಪಾಲರೆಡ್ಡಿ ರಾಜರೆಡ್ಡಿ ಚಿಮ್ಮನಚೋಡ ಇವರನ್ನು ಅಧ್ಯಕ್ಷರನ್ನಾಗಿ ಮತ್ತು ಕುಂಚಾವರಂ ಕ್ಷೇತ್ರದ ದಿವಾಕರ ಸಾಯಬಣ್ಣ ಇವರಿಗೆ ಉಪಾಧ್ಯಕ್ಷರನ್ನಾಗಿ ಆಯ್ಕೆಗೊಳಿಸಬೇಕೆಂದು ಚಂದಾಪುರ ನಗರದಲ್ಲಿರುವ ಶಾಸಕರ ನಿವಾಸದಲ್ಲಿ ಜರುಗಿದ ನಿರ್ದೇಶಕರ ಸಭೆಯಲ್ಲಿ ಅಂತಿಮ ನಿರ್ಧಾರ ಕೈಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಭಾರಿ ಪೈಪೋಟಿ: ಕಳೆದ ಸಲ ಮೊದಲನೇ ಅವಧಿಗಾಗಿ ಅಧ್ಯಕ್ಷ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಸಿ ಅಂತಿಮ ಕ್ಷಣದಲ್ಲಿ ಲಾಟರಿ ಮೂಲಕ ಆಯ್ಕೆ ನಡೆಸಿದ ಸಂದರ್ಭದಲ್ಲಿ ನಿರಾಶೆಗೊಂಡಿದ್ದ ಬಿಜೆಪಿ ಬೆಂಬಲಿಗರಾದ ನಾರಾಯಣ ನಾಗಯ್ಯ ಕೊಟ್ರಕಿ ಅವರನ್ನು ಅಧ್ಯಕ್ಷರನ್ನಾಗಿ, ರಾಜೇಂದ್ರ ಶಿವರಾಯ ಕಲ್ಲೂರರೋಡ ಇವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆಗೊಳಿಸಲು ಚುನಾವಣೆಯಲ್ಲಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.