ವಿವೇಕ ಪುತ್ಥಳಿ ಅನಾವರಣಕ್ಕೆ 'ಸುಪ್ರೀಂ ಶಾಕ್'
ಗುಲ್ಬರ್ಗ: ಶತಮಾನದ ಹಿಂದೆಯೇ ವಿದೇಶದಲ್ಲಿ ಭಾರತದ ಕೀರ್ತಿ ಮೆರೆಸಿದಂತಹ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ಗುಲ್ಬರ್ಗದಲ್ಲಿ ಅಪಮಾನವಾಗಿದೆ. ಅದೂ ದೇಶಾದ್ಯಂತ ವಿವೇಕರ 150ನೇ ಜನ್ಮದಿನಾಚರಣೆ ಆಚರಿಸುತ್ತಿರುವ ಸಂಭ್ರಮದ ಸಂದರ್ಭದಲ್ಲಿ ಈ ವಿಲಕ್ಷಣ ಬೆಳವಣಿಗೆಗೆ ಗುಲ್ಬರ್ಗ ಸಾಕ್ಷಿಯಾಗಿದ್ದು ದುರಂತ.
ವಿವೇಕಾನಂದರ 11 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪನೆ ವಿಷಯದಲ್ಲಿ ಇಲ್ಲಿನ ಜಿಲ್ಲಾಡಳಿತ ತೋರಿದ ಜಾಣ ಅಲಕ್ಷ್ಯತನ, ಮಹಾನಗರ ಪಾಲಿಕೆಯವರ ಗೊತ್ತೇ ಇಲ್ಲ ಎಂಬ ಚಾಲಾಕಿತನ, ನಗರಾಭಿವೃದ್ಧಿ ಪ್ರಾಧಿಕಾರದವರ ಒಣ ಪ್ರತಿಷ್ಠೆಗಳೆಲ್ಲವೂ ಒಂದೆಡೆ ಮೇಳೈಸಿದ್ದರಿಂದ ಗುಲ್ಬರ್ಗದ ಸ್ವಾಭಿಮಾನಿ ನಾಗರಿಕರು ನಿರೀಕ್ಷಿಸಿದ್ದ ವಿವೇಕಾನಂದರ ಪ್ರತಿಮೆ ಅನಾವರಣ ನಡೆಯಲೇ ಇಲ್ಲ.
ಸುಪ್ರೀಂ ತೀರ್ಪಿಂದ 'ಫ್ಲಾಪ್ ಷೋ': ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಹಾಗೂ ಜನ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುವ ಯಾವುದೇ ಮೂರ್ತಿ, ಪುತ್ಥಳಿ, ಪ್ರತಿಮೆಗಳ ಅನಾವರಣ, ಸ್ಮಾರಕ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಸರ್ವೋಚ್ಚ ನ್ಯಾಯಾಲಯದಿಂದ ತೀರ್ಪು ಈ ಬೆಳವಣಿಗೆಗೆ ಸಾಥ್ ನೀಡಿದೆ. ಆದ್ದರಿಂದ ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರ ನಗರದ ರಾಷ್ಟ್ರಪತಿ ವೃತ್ತದಲ್ಲಿ ಬುಧವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ 'ಫ್ಲಾಪ್ ಷೋ' ಆಗಿ ಪರಿವರ್ತಿತವಾಯಿತು.
ನಗರದ ರಾಷ್ಟ್ರಪತಿ ವೃತ್ತದಲ್ಲಿರುವ ಜಿಲ್ಲಾ ಕೈಗಾರಿಕಾ ಕಚೇರಿಯ ಆವರಣ ಗೋಡೆಯ ಪಕ್ಕವೇ 11 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಕಂಚಿನ ಪುತ್ಥಳಿ ಸ್ಥಾಪನೆಗೆ ಸಕಲ ಸಿದ್ಧತೆಗಳಾಗಿದ್ದವು. ನಗರಾಭಿವೃದ್ಧಿ ಪ್ರಾಧಿಕಾರ ಈ ಅದ್ಧೂರಿ ಸಮಾರಂಭಕ್ಕೆ ಸಿಎಂ ಜಗದೀಶ ಶೆಟ್ಟರ್ ಅವರನ್ನೇ ಆಹ್ವಾನಿಸಿತ್ತು.
ಸಮಾರಂಭ ನೀರಸ: ಆದರೆ ಪ್ರತಿಮೆ ಅನಾವರಣದ ಜೋಶ್‌ನಲ್ಲಿ ಪ್ರಾಧಿಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪು, ಸ್ಥಳೀಯ ಸಂಸ್ಥೆಗಳೊಂದಿಗೆ ಹೊಂದಬೇಕಿದ್ದ ಸಂಪರ್ಕ-ಸಂಹವನ, ಈ ವಿಚಾರವಾಗಿ ಜಿಲ್ಲಾಡಳಿತದ ಜೊತೆಗೆ ಸ್ಥಾಪಿಸಬೇಕಿದ್ದ ಸಂಪರ್ಕ ಯಾವುದಕ್ಕೂ ಕ್ಯಾರೆ ಎನ್ನದೆ ಮುಂದಡಿ ಇಡದ್ದೇ ಮಹತ್ವದ ಸಮಾರಂಭ ನೀರಸವಾಗಲು ಕಾರಣವಾಯಿತು.
ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದ(ಜ.18) ದಿನದಿಂದಲೇ ರಾಷ್ಟ್ರಪತಿ ವೃತ್ತದಲ್ಲಿ ವಿವೇಕರ ಪ್ರತಿಮೆ ಸ್ಥಾಪನೆ ಪೂರ್ವ ಸಿದ್ಧತೆ ಶುರುವಾಗಿದ್ದು. ನ್ಯಾಯಾಲಯದ ತೀರ್ಪು ದೇಶದ ಗಮನ ಸೆಳೆದು ಸುದ್ದಿಯಾದಾಗ ಇದನ್ನೆಲ್ಲ ಮೊದಲೇ ಗ್ರಹಿಸಿ ಪುತ್ಥಳಿ ಸ್ಥಾಪನೆಯ ಈ ಸಮಾರಂಭ ಬೇಡವೆಂದು ಜಿಲ್ಲಾಡಳಿತ, ಪಾಲಿಕೆ ಪ್ರಾಧಿಕಾರದವರಿಗೆ ಸೂಚಿಸಬಹುದಿತ್ತಲ್ಲವೆ?
'ಕನ್ನಡಪ್ರಭ'ಕ್ಕೆ ಲಭ್ಯ ಮಾಹಿತಿಗಳ ಪ್ರಕಾರ, ಈ ಏಜೆನ್ಸಿಗಳು ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಎಳ್ಳಷ್ಟೂ ತಲೆಕೆಡಿಸಿಕೊಂಡಿರಲಿಲ್ಲ. ಅದು ಯಾವಾಗ ಸಿಎಂ ಪ್ರವಾಸ ಪಟ್ಟಿಯಲ್ಲಿ ಕಂಡಿತೋ ಆಗ ಆ ವಿಚಾರವಾಗಿ ಅವಕ್ಕಾದರು.
ಚರಂಡಿ ಅತಿಕ್ರಮಣ ತರವೇ? ದೊಡ್ಡದಾದ ಚರಂಡಿ ಮೇಲೆಯೇ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದು ಸರಿಯೇ? ಪಾಲಿಕೆ ಈ ವಿಷಯದಲ್ಲಿ ಜಾರಿ ಬಿದ್ದದ್ದು ದುರಂತ.
ನಗರದಲ್ಲಿ ಸಮಾರಂಭ ಆಯೋಜಿಸಲಾಗಿದ್ದರೂ ಅದರ ಸ್ಥಳವೆಲ್ಲಿದೆ? ಎಲ್ಲಿ ಪ್ರತಿಮೆ ಸ್ಥಾಪಿಸಲಾಗುತ್ತಿದೆ? ಎಂದು ಕನಿಷ್ಠ ಕುತೂಹಲಕ್ಕಾದರೂ ಪಾಲಿಕೆ ಅಧಿಕಾರಿಗಳು ಪರಿಶೀಲನೆ ಮಾಡದೆ ಹೋಗಿದ್ದು ಈ ಬೆಳವಣಿಗೆಯ ಬಹುದೊಡ್ಡ ಲೋಪ.
ಇವೆಲ್ಲ ಲೋಪಗಳು ಸಂಗಮಿಸಿಯೇ ವಿವೇಕರ ಪ್ರತಿಮೆ ಅನಾವರಣ ಕೊನೆಗೂ ರದ್ದಾಗಿದ್ದು. ನಗರ ಈಚೆಗಿನ ದಿನಗಳಲ್ಲಿ ಸಾಕ್ಷಿಯಾದ ವಿಚಿತ್ರ ಬೆಳವಣಿಗೆ. ಜಿಲ್ಲಾಡಳಿತ, ಪಾಲಿಕೆ, ಜಿಡಿಎ ತುಸು ಜಾಗೃತರಾಗಿದ್ದರೂ ಈ ಬೆಳವಣಿಗೆ ನಡೆಯುತ್ತಿರಲಿಲ್ಲ.
ಸಿಎಂಗಾಗಿ ಕಾದಿದ್ದೇ ಬಂತು: ಮಧ್ಯಾಹ್ನ 1 ಗಂಟೆಗೆ ಪುತ್ಥಳಿ ಅನಾವರಣಕ್ಕೆ ಸಿಎಂ ಬರುವುದಾಗಿ ಸಾರಲಾಗಿತ್ತು. ಅದಕ್ಕಾಗಿ ಸಾವಿರಾರು ಯುವಕರು, ಕಾಲೇಜು ವಿದ್ಯಾರ್ಥಿಗಳು, ಶಾಲಾ ಮಕ್ಕಳು, ಉಪನ್ಯಾಸಕರು, ಶಿಕ್ಷಕರು, ವಿವೇಕರ ಅಭಿಮಾನಿಗಳು ಕಾದಿದ್ದರು. ಆದರೆ ಸಿಎಂ ಬರಲೇ ಇಲ್ಲ. ಬದಲಾಗಿ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ, ರಾಮಕೃಷ್ಣ-ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದು ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ ಸಮಾರಂಭದಲ್ಲಿ ಮಾತನಾಡಿ, ಸುಪ್ರೀಂಕೋರ್ಟ್ ತೀರ್ಪಿನಿಂದ ಪ್ರತಿಮೆ ಅನಾವರಣ ರದ್ದಾಗಿದೆ. ಕಾನೂನು ತೊಡಕು ಇರುವುದರಿಂದ ಸಿಎಂ ಬಂದಿಲ್ಲ. ದಯವಿಟ್ಟು ಎಲ್ಲ ಅಭಿಮಾನಿಗಳು ಕ್ಷಮಿಸಬೇಕು ಎಂದು ನಿರಾಶೆಯಿಂದ ಭಾವುಕರಾಗಿ ಹೇಳಿದರು.
ಮಹಾನಗರ ಪಾಲಿಕೆಯಿಂದ ಸ್ಥಳಾವಕಾಶ ಪಡೆದುಕೊಂಡು 13 ಲಕ್ಷ ವೆಚ್ಚದಲ್ಲಿ ಪುತ್ಥಳಿ ಸಿದ್ಧಪಡಿಸಿ ಅನಾವರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ನ್ಯಾಯಾಲಯ ಆದೇಶ ಪಾಲನೆ ಮಾಡಲೇಬೇಕಾಗಿರುವುದರಿಂದ ಈ ಮಹತ್ವದ ಅನಾವರಣ ಕಾರ್ಯ ಸ್ಥಗಿತಗೊಂಡಿದೆ ಎಂದು ವಿದ್ಯಾಸಾಗರ ಕುಲಕರ್ಣಿ ವಿಷಾದ ವ್ಯಕ್ತಪಡಿಸಿದ್ದಾರೆ.