ಸ್ಪೀಕರ್ ಪ್ರವಾಸದಲ್ಲಿ ರಾಜಕೀಯ ತಂತ್ರಗಾರಿಕೆ ಇಲ್ಲ: ಶೆಟ್ಟರ್
ಜೇವರ್ಗಿ: 'ರಾಜಿನಾಮೆ ರಗಳೆಯಿಂದಾಗಿ ತಮ್ಮ ಸರ್ಕಾರ ಅಸ್ಥಿರವಾಗಿಲ್ಲ' ಎಂದಿರುವ ಸಿಎಂ ಶೆಟ್ಟರ್, ಕೆಲವು ಶಾಸಕರು ಹೊರಗಿದ್ದರು ಮಾನಸಿಕವಾಗಿ ತಮ್ಮ ನೇತೃತ್ವದ ಸರ್ಕಾರದೊಂದಿಗೆ ಇದ್ದಾರೆ. ಬಹುಮತ ಕಳೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ತಾಲೂಕಿನ ಸೊನ್ನ ಗ್ರಾಮದಲ್ಲಿ ನಡೆಯುತ್ತಿರುವ ವಿರಕ್ತಮಠದ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಿಎಂ ಶೆಟ್ಟರ್ ಹೆಲಿಪ್ಯಾಡ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾವು ಈ ಮುಂಚೆ ನಿರ್ಧರಿಸಿದಂತೆ ಫೆ.8ರಂದು ಬಜೆಟ್ ಮಂಡಿಸುವುದಾಗಿ ಹೇಳಿದರಲ್ಲದೆ ಸಿದ್ಧತೆಗಳು ಸಾಗಿವೆ ಎಂದರು.
ಹೈದ್ರಾಬಾದ್-ಕರ್ನಾಟಕದ ವಿಶೇಷ ಸ್ಥಾನಮಾನ 371 ಕಲಂ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದು, ಅದಕ್ಕಾಗಿ ಹಿರಿಯ ಅಧಿಕಾರಿಗಳು ರೂಪರೇಷೆಗಳನ್ನು ತಯಾರಿಸುತ್ತಿದ್ದಾರೆ. ಯೋಜನೆ ಪ್ರಗತಿ ಹಂತದಲ್ಲಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಿದರು.
ರಾಜಿನಾಮೆ ರಗಳೆ ಸಾಗಿರುವಾಗ ಭಯದಿಂದ ಸ್ಪೀಕರ್ ಬೋಪಯ್ಯ ಅವರನ್ನು ತಾವೇ ವಿದೇಶ ಪ್ರವಾಸಕ್ಕೆ ಕಳುಹಿಸಿರುವ ಆರೋಪ ಕೇಳಿ ಬರುತ್ತಿದೆಯಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್, ಸ್ಪೀಕರ್ ಪ್ರವಾಸ ಅವರ ವೈಯಕ್ತಿಕ, ಇದರಲ್ಲಿ ಯಾವುದೇ ರಾಜಕೀಯ ತಂತ್ರಗಾರಿಕೆ ಇಲ್ಲವೆಂದು ನುಣುಚಿಕೊಂಡರು.