'ಅನ್ನದಾನದಂತೆ ಮತದಾನವೂ ಶ್ರೇಷ್ಠ'
ಚಿಂಚೋಳಿ: ಅನ್ನದಾನ ಮತ್ತು ವಿದ್ಯಾದಾನ ಹೇಗೆ ಮಹತ್ವದಾಗಿದೆಯೋ ಹಾಗೇ ಮತದಾನ ಅಷ್ಟೇ ಪ್ರಾಮುಖ್ಯತೆ ಹೊಂದಿದೆ. ಮತ ದಾನ ಮಾಡುವಾಗ ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ದಾನ ಮಾಡಿದರೆ ಹಾಗೂ ಸಾಮಾಜಿಕ ಕಳಕಳಿ ಹೊಂದಿದ ಪ್ರಾಮಾಣಿಕ ವ್ಯಕ್ತಿಗೆ ಆರಿಸಿ ಕಳಿಸಿದರೆ ಸರ್ಕಾರದ ಸೌಲಭ್ಯಗಳು ಸಿಗಲು ಸಾಧ್ಯವಿದೆ ಎಂದು ಚಿಂಚೋಳಿ ಸಿವಿಲ್ ನ್ಯಾಯಾಧೀಶ ಶೈನಿ ಕೆ.ಎಂ. ಹೇಳಿದರು.
ಭಾರತ ಚುನಾವಣಾ ಆಯೋಗ, ತಾಲೂಕು ಆಡಳಿತ ಮತ್ತು ಕಾನೂನು ಸೇವಾ ಸಮಿತಿ ಚಿಂಚೋಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಶುಕ್ರವಾರ ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸ ಮಲ್ಲಿಕಾರ್ಜುನ ಪಾಲಾಮೂರ ಚುನಾವಣೆ ಮತ್ತು ಮತದಾನ ಕುರಿತು ವಿಶೇಷ ಉಪನ್ಯಾಸ ನೀಡಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಿವರಾಯ ಹಾದಿಮನಿ ಕಾನೂನು ಮತ್ತು ಮಾಹಿತಿ ಹಕ್ಕುಗಳ ಕುರಿತು ಮಾತನಾಡಿದರು.
ತಹಸೀಲ್ದಾರರು ಹಾಗೂ ಮತದಾರರ ನೋಂದಾಣಾಧಿಕಾರಿ ಜಗನ್ನಾಥರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಪಂ ಮುಖ್ಯಾಧಿಕಾರಿ ಸುರೇಶ ಬಬಲಾದ ಸ್ವಾಗತಿಸಿದರು. ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜರ್ನಾಧನರೆಡ್ಡಿ ಪಾಟೀಲ್ ನಿರೂಪಿಸಿದರು. ವೆಂಕಟೇಶ ವಂದಿಸಿದರು.
ಇದೇ ಸಂದರ್ಭದಲ್ಲಿ ಹೊಸದಾಗಿ ಮತದಾರರ ಗುರುತಿನ ಚೀಟಿಯನ್ನು ನೀಡಲಾಯಿತು. ಕಂದಾಯ ನಿರೀಕ್ಷಕ ಮನೋಹರರೆಡ್ಡಿ ಉಪಸ್ಥಿತರಿದ್ದರು.