ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ (ಅಪರಾಧ ಸುದ್ದಿಗಳು)

Mainashree
Updated On : 26 Jan 2013, 12:20 pm

ಗುಲ್ಬರ್ಗ: ಗಂಡನ ಮನೆಯವರ ದೈಹಿಕ ಮತ್ತು ಮಾನಸಿಕ ಕಿರುಕುಳ ತಾಳದೆ ಮಹಿಳೆಯೊಬ್ಬಳು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ನಿಂಗಮ್ಮ ಗಂಡ ವಿಜಯಕುಮಾರ ದೇಸಾಯಿ ಎಂಬ ಮಹಿಳೆ ಸಾವಿಗೀಡಾದ ನತದೃಷ್ಟ ಮಹಿಳೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಳ್ಳಳ್ಳಿ ಗ್ರಾಮದ ಮಲ್ಲಣ್ಣಗೌಡ ಅವರ ಪುತ್ರಿ ನಿಂಗಮ್ಮಳಿಗೆ ಕೊಲ್ಲೂರು ಗ್ರಾಮದ ವಿಜಯಕುಮಾರನೊಂದಿಗೆ ಎರಡುವರೆ ವರ್ಷದ ಹಿಂದೆ 4 ತೊಲಿ ಬಂಗಾರ, 50 ಸಾವಿರ ನಗದು ಹಣ ನೀಡಿ ಮದುವೆ ಮಾಡಿಕೊಡಲಾಗಿತ್ತು. ಒಂದು ವರ್ಷದ ನಂತರ ಗಂಡ ವಿಜಯಕುಮಾರ ದೇಸಾಯಿ, ಅತ್ತೆ ಕಮಲಮ್ಮ, ನಾದಿನಿ ಸರಸಮ್ಮ ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ವಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ವರದಕ್ಷಿಣೆ ಕಿರುಕುಳ
ಗುಲ್ಬರ್ಗ/ಅಫಜಲ್ಪುರ: ತಾಲೂಕಿನ ಭೋಸಗಾ ಗ್ರಾಮದಲ್ಲಿ ಮಹಿಳೆಯೊಬ್ಬಳಿಗೆ ವರದಕ್ಷಿಣೆ ಕಿರುಕುಳ ನೀಡಿದ ಕುರಿತು ಅಫಜಲ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿತ್ರಿಬಾಯಿ ಗಂಡ ಹಣಮಂತರಾಯ ಬಿರಾದಾರ ಎಂಬ ಮಹಿಳೆ ಕಿರುಕುಳಕ್ಕೆ ಒಳಗಾದವರು. ಸಾವತ್ರಿಯನ್ನು ಕಳೆದ 7 ವರ್ಷದ ಹಿಂದೆ ಹಣಮಂತರಾಯ ಬಿರಾದಾರ ಎಂಬಾತನೊಂದಿಗೆ ವರದಕ್ಷಿಣೆ ನೀಡಿ ಮದುವೆ ಮಾಡಿಕೊಡಲಾಗಿತ್ತು. ಮೂರು ವರ್ಷದ ನಂತರ ಕಿರಾಣಿ ಅಂಗಡಿ ಇಡಲು 50 ಸಾವಿರ ತರಬೇಕೆಂದು ಗಂಡ, ಮೈದುನ, ಅತ್ತೆ, ಮಾವ ಸೇರಿ ಸಾವಿತ್ರಿಗೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದಾರೆ. ತನಗೆ ಜೀವ ಭಯವಿದ್ದು, ರಕ್ಷಣೆ ನೀಡಬೇಕೆಂದು ಸಾವಿತ್ರಿ ಠಾಣೆಗೆ ನೀಡಿದ್ದಾರೆ.

ಮಹಿಳೆ ಕೊಲೆ
ಜೇವರ್ಗಿ: ತಾಲೂಕಿನ ವಡಗೇರಾ ಗ್ರಾಮದಲ್ಲಿ ಮಹಿಳೆಯೊಬ್ಬಳ ಕತ್ತಿಗೆ ಹಗ್ಗ ಬಿಗಿದು ಕೊಲೆಗೈದ ಘಟನೆ ಬುಧವಾರ ಮಧ್ಯೆ ರಾತ್ರಿ ನಡೆದಿದೆ. ಮೃತಳನ್ನು ರೇಣುಕಾ ಶರಣಪ್ಪ ಯಮನೂರ (40) ಎಂದು ಗುರುತಿಸಲಾಗಿದೆ. ಮೃತಳಿಗೆ ಪತಿ, ಇಬ್ಬರು ಪುತ್ರಿಯರಿದ್ದಾರೆ. ಪತಿ ಬೇರೆ ಮದುವೆಯಾಗಿ ಸುರುಪುರ ತಾಲೂಕಿನ ಕನ್ನಹಳ್ಳಿಯಲ್ಲಿ ವಾಸಿಸುತ್ತಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಒಬ್ಬ ಪುತ್ರಿ ಮದುವೆಯಾಗಿ ಗಂಡನ ಮನೆಯಲ್ಲಿ ವಾಸವಾಗಿದ್ದಾಳೆ. ಕಿರಿಯ ಪುತ್ರಿ ತೋಟಮ್ಮ ಶರಣಪ್ಪ ಯಮನೂರ ನೀಡಿದ ದೂರಿನನ್ವಯ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಘಟನಾ ಸ್ಥಳಕ್ಕೆ ಸಿಬ್ಬಂದಿ ಹಾಗೂ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಆರೋಪಿ ಶೋಧ ಕಾರ್ಯ ಮುಂದುವರೆದಿದೆ.

ಬೈಕ್ ಕಳ್ಳನ ಬಂಧನ
ಗುಲ್ಬರ್ಗ: ಗಣೇಶ ನಗರದ ಬಳಿ ದ್ವಿಚಕ್ರ ವಾಹನ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗುಲ್ಬರ್ಗ ತಾಲೂಕಿನ ಕಲ್ಲಬೆನ್ನೂರ ಗ್ರಾಮದ ಮಲ್ಲಿಕಾರ್ಜುನ ತಂದೆ ಶಿವಯ್ಯ ಗುತ್ತೇದಾರ ಎಂಬಾತನೆ ಬಂಧಿತ ಕಳ್ಳ. ಈತ ದ್ವಿಚಕ್ರ ವಾಹನ ಕಳ್ಳತನ ಮಾಡಿಕೊಂಡು ಗಣೇಶ ನಗರದ ಮಾರ್ಗವಾಗಿ ಜಿಡಿಎ ಹೌಸಿಂಗ್ ಬೋರ್ಡ ಕಾಲೋನಿಗೆ ಹೋಗುತ್ತಿದ್ದಾಗ ಪೊಲೀಸರು ನೋಡಿ ವಾಹನದ ದಾಖಲೆ ಪರಿಶೀಲಿಸಿದಾಗ ಕಳ್ಳತನ ವಾಹನವೆಂದು ಬಲವಾಗಿ ಕಂಡು ಬಂದಿರುವುದರಿಂದ ವಾಹನದೊಂದಿಗೆ ಆತನನ್ನು ಬಂಧಿಸಿದ್ದಾರೆ. ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement