ಅಕ್ಕಿ ಹಾರುತ್ತಿದೆ, ಬತ್ತ ಬೀಳುತ್ತಿದೆ!
ಕನ್ನಡಪ್ರಭ ವಾರ್ತೆ, ಯಾದಗಿರಿ, ಜ.29
ಒಂದೆಡೆ 'ಅಕ್ಕಿ ಹಾರುತ್ತಿದ್ದರೆ' ಮತ್ತೊಂದೆಡೆ 'ಬತ್ತ ಬೀಳುತ್ತಿದೆ'!
- ಇದರರ್ಥ ಇಷ್ಟೇ, ಅಕ್ಕಿ ದರ ಗಗನಕ್ಕೇರುತ್ತಿದ್ದರೆ, ಅದೇ ಕಾಲಕ್ಕೆ ಬತ್ತದ ಬೆಲೆ ಪಾತಾಳಕ್ಕಿಳಿಯುತ್ತಿದೆ. ಇದಕ್ಕೆಲ್ಲ ಕಾರಣ ಮಧ್ಯವರ್ತಿಗಳು, ಸರ್ಕಾರ ಮತ್ತು ಬಂಡವಾಳಶಾಹಿಗಳು.
ಸದ್ಯಕ್ಕೆ ಸಾಧಾರಣ ಅಕ್ಕಿ ದರ ಇದೀಗ ಕೆಜಿಗೆ 50 ದಾಟಿದೆ. ಆದರೆ, ಇದರ ನೇರ ಲಾಭ 'ಬತ್ತದ ಕಣಜ' ಎಂದೇ ಖ್ಯಾತಿಯಾಗಿರುವ ರಾಯಚೂರು, ಗಂಗಾವತಿ, ಯಾದಗಿರಿ, ಕೊಪ್ಪಳದ ರೈತರಿಗೆ ಆಗುತ್ತಿಲ್ಲ ಎಂಬುದು ಮಾತ್ರ ವಿಪರ್ಯಾಸ. ಅದೇ ಕಾಲಕ್ಕೆ 75 ಕೆಜಿ ಬತ್ತದ ರೇಟು ಒಮ್ಮಿಗೆ 200 ಇಳಿಕೆ ಕಂಡಿದೆ.
ಬತ್ತಕ್ಕೆ 200 ಇಳಿಕೆ!: ನೀರಾವರಿ ಭಾಗದಲ್ಲಿ ವ್ಯಾಪಕವಾಗಿ ಬತ್ತ ಬೆಳೆಯಲಾಗಿದ್ದು, ರಾಶಿ ಮಾಡಿದ ತಕ್ಷಣ ವ್ಯಾಪಾರಸ್ಥರು ಮತ್ತು ಮಧ್ಯವರ್ತಿಗಳು ಬತ್ತ ಖರೀದಿಗೆ ಮುಗಿಬಿದ್ದಿದ್ದರು. ಒಂದು ತಿಂಗಳಿಂದ ಬತ್ತ ವ್ಯಾಪಾರ ನಡೆಯುತ್ತಿದ್ದು, ವ್ಯಾಪಾರಸ್ಥರು ಪೈಪೋಟಿಗೆ ಬಿದ್ದವರಂತೆ ಬತ್ತ ಖರೀದಿಸಿದರು. ಇದರಿಂದ ಬತ್ತದ ದರ ನಿರಂತರವಾಗಿ ಏರಿಕೆ ಕಂಡು 75 ಕೆಜಿಗೆ 1800 ಆಗಿತ್ತು.
ಅಕ್ಕಿ ಗಿರಣಿ ಮಾಲೀಕರು ಹಾಗೂ ಮಧ್ಯವರ್ತಿಗಳ ತಮಗೆ ಬೇಕಾಗುವಷ್ಟು ಬತ್ತವನ್ನು ಮೊದಲು ಹಂತವಾಗಿ ಖರೀದಿಸಿದ್ದರಿಂದ ಈಗ ಒಂದು ವಾರದಿಂದ ಬೆಲೆ ಇಳಿಕೆಯಾಗಿದೆ. ಈಗ ಅದೇ ಬತ್ತಕ್ಕೆ 1550ರಿಂದ 1600ಗೆ ಇಳಿಕೆ ಕಂಡಿದೆ. ಬರದ ಹಿನ್ನೆಲೆಯಲ್ಲಿ ಒಂದೇ ಬೆಳೆ ತೆಗೆದಿರುವುದರಿಂದ ಬೇಡಿಕೆ ಜಾಸ್ತಿಯಾಗಿದೆ. ಆದ್ದರಿಂದ ಹೊರ ರಾಜ್ಯಗಳಿಗೆ ಸಾಗಣೆ, ಅಕ್ರಮ ದಾಸ್ತಾನು ಹೆಚ್ಚಿದ್ದು, ಅಕ್ಕಿ ಬೆಲೆ ಗಗನಮುಖಿಯಾಗಲು ಕಾರಣವಾಗಿದೆ.
ಮಧ್ಯವರ್ತಿಗಳ ಕೈಯಲ್ಲಿ ಮಾರುಕಟ್ಟೆ: ಬತ್ತದ ದರ ಇಳಿದರೂ ಅಕ್ಕಿ ಬೆಲೆ ಇಳಿಯುತ್ತಿಲ್ಲ. ಇದಕ್ಕೆ ಕಾರಣ ಮಧ್ಯವರ್ತಿಗಳು ಹಾಗೂ ಬಂಡವಾಳಶಾಹಿಗಳು. ತಮಗೆ ಬೇಕಾದಷ್ಟು ಬತ್ತವನ್ನು ಖರೀದಿಸಿ ಈಗ ಖರೀದಿ ಸ್ಥಗಿತಗೊಳಿಸಿದ್ದರಿಂದ ಮಾರುಕಟ್ಟೆಯಲ್ಲಿ ಅದರ ದರ ಇಳಿಮುಖವಾಗಿದೆ. ಅಕ್ರಮ ದಾಸ್ತಾನು ಮಾಡಿಟ್ಟುಕೊಳ್ಳುವುದರಿಂದ ಏರಿದ ಅಕ್ಕಿ ದರ ಇಳಿಯುತ್ತಿಲ್ಲ.
ಒಟ್ಟಿನಲ್ಲಿ ಅಕ್ಕಿ ಬೆಲೆ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ತುತ್ತು ಅನ್ನಕ್ಕಾಗಿ ದಿನವಿಡಿ ದುಡಿದರೂ ಸಾಲದಂತಾಗಿದೆ. ಬೆಲೆ ನಿಯಂತ್ರಣಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವಿದೆ.