ನೇಕಾರರ ಬೇಡಿಕೆಗೆ ಸ್ಪಂದಿಸಲು ಒತ್ತಾಯ
ಆಳಂದ: ಸಂಕಷ್ಟದಲ್ಲಿರುವ ರಾಜ್ಯ ನೇಕಾರ ಬಾಂಧವರ ಬೇಡಿಕೆಗಳನ್ನು ಸರ್ಕಾರ ಸ್ಪಂದಿಸಬೇಕೆಂದು ಕೈಮಗ್ಗ ನಿಗಮದ ರಾಜ್ಯ ಹಿರಿಯ ಸದಸ್ಯ ಸಿದ್ಧಾರೂಢ ಚ. ಸನಗುಂದಿ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ನೇಕಾರ ನಿಗಮದ ನೂತನ ಅಧ್ಯಕ್ಷ ರಾಜಶೇಖರ ಶೀಲವಂತ ಅವರಿಗೆ ಬೇಡಿಕೆಗೆ ಪತ್ರ ಸಲ್ಲಿಸಿರುವ ಅವರು, ಸರ್ಕಾರದ ನೆರವಿನಿಂದ ಆಳಂದ, ಗುರುಮಠಕಲ್ ಪಟ್ಟಣದಲ್ಲಿ ನಿರ್ಮಿಸಲಾದ ವಸತಿ ಗೃಹಗಳ ಸಾಲದ ಬಡ್ಡಿ ಮನ್ನಾ ಮಾಡಿದ ಬಳಿಕ ಮನೆಗಳ ಸಾಲವನ್ನು ನೇಕಾರರು ಭರಿಸಿದ್ದಾರೆ. ಆದರೂ ಫಲಾನುಭವಿಗಳ ಹೆಸರಿಗೆ ಇನ್ನೂ ಮನೆಗಳ ನೋಂದಣಿ ಕೈಗೊಂಡಿಲ್ಲ ಎಂದರು.
ಸಾಲ ಮನ್ನಾದ ಕುರಿತು ಸರ್ಕಾರದ ಹೇಳಿಕೆಯಂತೆ ಇನ್ನೂ ಸಾಲ ಮನ್ನಾ ಮಾಡಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶೇ.3ರ ಬಡ್ಡಿ ದರದಲ್ಲಿ ಕೈಮಗ್ಗ ನಿಗಮದ ನೇಕಾರರಿಗೆ 50 ಸಾವಿರ ವರೆಗಿನ ಸಾಲವನ್ನು ಇದುವರೆಗೂ ಯಾರಿಗೂ ವಿತರಿಸಿಲ್ಲ ಎಂದರು.
ಮಾರುಕಟ್ಟೆಯಲ್ಲಿ ದಿನ ಬಳಕೆಯ ಎಲ್ಲ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ಸಾಗಿಸಲು ತೊಂದರೆಯಾಗುತ್ತಿದೆ. ಈ ಕುರಿತು ಸರ್ಕಾರವು ನೇಕಾರರಿಗೆ ನೀಡಿದ ಭರವಸೆಯಂತೆ ನಡೆದುಕೊಳ್ಳಬೇಕು. ನಿಗಮದ ಅಧ್ಯಕ್ಷರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸಬೇಕೆಂದು ಆಗ್ರಹಿಸಿದರು. ನಾಗೇಂದ್ರಪ್ಪ ಹೊಸಮನಿ, ಚಂದ್ರಕಾಂತಯ್ಯ ಸ್ವಾಮಿ, ಅಯೂಬಲಿ ಜಾಮದಾರ, ಅಬ್ದಲ್ಸಾಬ್ ಅಂಬುಲಕಿಚಡೆ, ಮಹಾನಂದ ದೊಡ್ಮನಿ, ಕಸ್ತೂರಬಾಯಿ ಜಾಲದ್ ಇದ್ದರು.