ಹೆಚ್ಚಿನ ಅಕ್ಕಿ ಸಂಗ್ರಹಿಸಿದರೆ ಕ್ರಿಮಿನಲ್ ಕೇಸ್
ಗುಲ್ಬರ್ಗ: ರಾಜ್ಯದಲ್ಲಿ ಸೋನಾಮಸೂರಿ ಹಾಗೂ ಇತರೆ ಉತ್ತಮ ದರ್ಜೆಯ ಅಕ್ಕಿಯ ಬೆಲೆ ತೀವ್ರವಾಗಿ ಏರುತ್ತಿದೆ. ಮಾರಾಟಗಾರರು ಸೃಷ್ಟಿಸುವ ಕೃತಕ ಅಭಾವವೇ ಇದಕ್ಕೆ ಕಾರಣ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಚಿಲ್ಲರೆ ಮಾರಾಟಗಾರರು 5 ಕ್ವಿಂಟಲ್ ಹಾಗೂ ಸಗಟು ಅಕ್ಕಿ ಮಾರಾಟಗಾರರು ಒಂದು ಸಾವಿರ ಕ್ವಿಂಟಲ್‌ಗಿಂತಲೂ ಹೆಚ್ಚಿನ ಅಕ್ಕಿಯನ್ನು ಸಂಗ್ರಹಿಸಿದ್ದಲ್ಲಿ ಕರ್ನಾಟಕ ಅವಶ್ಯಕ ವಸ್ತುಗಳ ಕಾಯ್ದೆ 1955ರ ಅನ್ವಯ ಅದನ್ನು ವಶಪಡಿಸಿಕೊಂಡು ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಎ.ಟಿ. ಜಯಪ್ಪ ಎಚ್ಚರಿಕೆ ನೀಡಿದ್ದಾರೆ.
ನಿಯಂತ್ರಣಕ್ಕೆ ಕ್ರಮ: ಅವರು ಬುಧವಾರ ತಮ್ಮ ಕಚೇರಿಯ ಸಭಾಂಗಣದಲ್ಲಿ ತೀವ್ರವಾಗಿ ಏರುತ್ತಿರುವ ಅಕ್ಕಿ ಬೆಲೆಯನ್ನು ನಿಯಂತ್ರಿಸಲು ವಹಿಸಬೇಕಿರುವ ಕ್ರಮಗಳ ಕುರಿತು ಜಿಲ್ಲೆಯ ಚಿಲ್ಲರೆ ಹಾಗೂ ಸಗಟು ಅಕ್ಕಿ ವರ್ತಕರ ಸಭೆಯಲ್ಲಿ ಮಾತನಾಡಿದರು.
ಜೀವನಾವಶ್ಯಕ ವಸ್ತು ಅಕ್ಕಿ. ಅದರ ಬೆಲೆ ತೀವ್ರವಾಗಿ ಏರುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಚಿಲ್ಲರೆ ಹಾಗೂ ಸಗಟು ವರ್ತಕರು ಅಕ್ಕಿ ಹಾಗೂ ಬತ್ತವನ್ನು ಹೆಚ್ಚು ಸಂಗ್ರಹಿಸಬಾರದು. ಅಕ್ಕಿ ಹಾಗೂ ಬತ್ತವನ್ನು ಹೆಚ್ಚು ಸಂಗ್ರಹಿಸುವುದರ ಮೂಲಕ ಕೆಲವೊಮ್ಮೆ ಕೃತಕ ಅಭಾವವನ್ನು ಸೃಷ್ಟಿಸಲಾಗುತ್ತದೆ. ಈ ರೀತಿಯ ಅಭಾವ ಸೃಷಿಯಾದದಂತೆ ಕ್ರಮ ವಹಿಸಲು ಸರ್ಕಾರ ಅಧಿಸೂಚನೆ ಸಹ ಹೊರಡಿಸಿದೆ.
ಅದರಂತೆ ಚಿಲ್ಲರೆ ವ್ಯಾಪಾರಿಗಳು 5 ಕ್ವಿಂಟಲ್ ಹಾಗೂ ಸಗಟು ವ್ಯಾಪಾರಿಗಳು ಒಂದು ಸಾವಿರ ಕ್ವಿಂಟಲ್‌ಗಿಂತಲೂ ಹೆಚ್ಚಿನ ಅಕ್ಕಿಯ ದಾಸ್ತಾನು ಮಾಡುವಂತಿಲ್ಲ, ಹೆಚ್ಚಿನ ದಾಸ್ತಾನು ಕಂಡು ಬಂದಲ್ಲಿ ಅದನ್ನು ವಶ ಪಡಿಸಿಕೊಂಡು ಗಂಭೀರವಾದ ಕ್ರಮ ಜರುಗಿಸಲಾಗುವುದು ಮತ್ತು ವಶಕ್ಕೆ ತೆಗೆದುಕೊಳ್ಳಲಾಗುವ ಅಕ್ಕಿಯನ್ನು ಸಾರ್ವಜನಿಕ ವಿತರಣ ವ್ಯವಸ್ಥೆಯ ಮೂಲಕ ಅದನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
ಸಂಗ್ರಹ ಮಾಹಿತಿ ನೀಡಿ: ಅಲ್ಲದೆ ವರ್ತಕರು ದಾಸ್ತಾನು ಮಳಿಗೆಗಳಲ್ಲಿ ಸಂಗ್ರಹಿಸಿರುವ ಅಕ್ಕಿ ಹಾಗೂ ಬತ್ತದ ಪ್ರಮಾಣದ ಬಗ್ಗೆ ಪ್ರತಿ ಹದಿನೈದು ದಿನಕ್ಕೊಮ್ಮೆ ಮಾಹಿತಿ ನೀಡಬೇಕು. ತಿಂಗಳ ಮೊದಲ ಹಾಗೂ ಹದಿನೈದನೇ ತಾರೀಖಿನಿಂದ ಮಾಹಿತಿ ನೀಡಬೇಕು. ಇದು ಕಡ್ಡಾಯ. ಇದರ ಪರಿಶೀಲನೆಗೆ ಅಧಿಕಾರಿಗಳನ್ನು ನೇಮಿಸಲಾಗುವುದು. ವರ್ತಕರ ಸಂಗ್ರಹಗಾರಗಳಲ್ಲಿ ಎಷ್ಟು ಪ್ರಮಾಣದ ಅಕ್ಕಿ ಉಳಿದಿದೆ ಎಂಬ ಮಾಹಿತಿಯನ್ನು ಪಡೆಯಲು ಕೂಡಲೇ ಪತ್ರ ಬರೆಯುವಂತೆ ಈ ಸಂದರ್ಭದಲ್ಲಿ ಅವರು ಸಹಾಯಕ ನಿರ್ದೇಶಕ ಹನುಮಂತಪ್ಪ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಲ ವರ್ತಕರು, ಜನಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ಸ್ವಾಗತವಿದೆ. ಅಕ್ಕಿಯನ್ನು ಸಂಗ್ರಹಿಸಿ ನಷ್ಟಕೀಡಾದ ವರ್ತಕರು ಜಿಲ್ಲೆಯಲ್ಲಿದ್ದಾರೆ. ಕಳೆದ ಬಾರಿ ಅಕ್ಕಿಯನ್ನು ಸಂಗ್ರಹಿಸಿದ ಪರಿಣಾಮ, ಬ್ಯಾಂಕ್‌ನವರು ಅದನ್ನು ಹರಾಜು ಹಾಕಿದ್ದಾರೆ. ಈ ಬಾರಿ ಆಂಧ್ರ ಹಾಗೂ ತಮಿಳುನಾಡಿನಲ್ಲಿ ಬತ್ತದ ಬೆಳೆ ಇಲ್ಲವಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಏರಿರುವ ಬೆಲೆ ನಿಧಾನವಾಗಿ ಇಳಿಯಲಿದೆ ಎಂದು ಅಭಿಪ್ರಾಯಪಟ್ಟರು.
ಅಕ್ಕಿ ವರ್ತಕರಾದ ಸಂಗಮೇಶ್ವರ, ರಾಹುಲ್, ಶ್ರೀನಿವಾಸ, ರಮೇಶ, ಕಿರಣಕುಮಾರ, ವೆಂಕಟೇಶ, ಕುಮಾರ ಸ್ವಾಮಿ, ಮೆಹಬೂಬ್ ಪಾಷ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.