ಕುಡಿವ ನೀರು ಪೈಪ್ಲೈನ್ಗೆ ಒಳಚರಂಡಿ ನೀರು ಮಿಶ್ರಣ
ಗುಲ್ಬರ್ಗ: ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ವಾರ್ಡ್ ನಂ.2 ಮತ್ತು 13ರ ಬಡಾವಣೆಗಳಲ್ಲಿ ಕುಡಿವ ನೀರಿನ ಮುಖ್ಯ ಪೈಪ್ ಲೈನಿನ ವಾಲ್ಗೆ ಡ್ರೈನೇಜ್ ಗುಂಡಿಯಿಂದ ಹೊಲಸು ಸೇರ್ಪಡೆಯಾಗಿದ್ದು, ಜನತೆ ಕಲುಷಿತ ನೀರು ಕುಡಿದು ಅಸ್ವಸ್ಥರಾಗುತ್ತಿದ್ದಾರೆ. ಕೂಡಲೇ ಕ್ರಮ ಜರುಗಿಸಬೇಕೆಂದು ಜಿಲ್ಲಾ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.
ಇಸ್ಲಾಮಾಬಾದ್ ಕಾಲೋನಿ, ಖಮರ್ ಕಾಲೋನಿ, ಮಿಲ್ಲತ್ ನಗರ, ಸೆರ್ಪುಮಡ್ಡಿ ಸೇರಿದಂತೆ ಇತರ ಬಡಾವಣೆಗಳಿಗೆ ಸರಬರಾಜು ಆಗುವ ಕುಡಿವ ನೀರಿನ ಮುಖ್ಯ ಪೈಲ್ ಲೈನಿನ ವಾಲ್ ಇದ್ದು, ಆ ವಾಲಿನ ಪಕ್ಕದಲ್ಲಿಯೇ ಡ್ರೈನೇಜ್ ಗುಂಡಿ ಮಾಡಲಾಗಿದೆ. ಈ ಗುಂಡಿಯಿಂದ ಸುಮಾರು ವರ್ಷಗಳಿಂದ ಕೊಳಕು ನೀರು ಹೊರಬಂದು ಕುಡಿವ ನೀರಿನ ನಲ್ಲಿ ತುಂಬೆಲ್ಲ ನೀರು ಸೇರುತ್ತಿದ್ದು, ಅದೇ ಕಲುಷಿತ ನೀರು ಸೇವಿಸುತ್ತಿರುವ ಜನತೆ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಪಕ್ಷದ ನಿಯೋಗ ಕರ್ನಾಟಕ ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ಭೇಟಿಯಾಗಿ ಮನವರಿಕೆ ಮಾಡಿದೆ.
ಪಟೇಲ್ ಎಂಜನಿಯರಿಂಗ್ ವರ್ಕಶಾಪನ ಪಕ್ಕದಲ್ಲಿರುವ ಕೊಳವೆ ಬಾವಿ ವಿದ್ಯುತ್ ಸಂಪರ್ಕವಿದ್ದ ಮೋಟಾರ ಕೆಟ್ಟು ಒಂದು ವರ್ಷ ಕಳೆದರೂ ಇಲ್ಲಿಯವರೆಗೆ ಯಾರು ಸ್ಪಂದಿಸಿಲ್ಲ.
ಸಮರ್ಪಕವಾಗಿ ರಸ್ತೆಗಳಿಲ್ಲ, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಜರುಗಿಸಬೇಕೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಬಸವ ಹಿರೇಮಠ, ಮುಖಂಡರಾದ ನಿಸಾರ್ ಅಹ್ಮದ್ಖಾನ್, ಶ್ರೀಮಂತ ಗುತ್ತೇದಾರ, ಜಗನ್ನಾಥ ಜವಳಿ, ಗುಡುಸಾಬ್ ಮುತವಲ್ಲಿ, ಚಾಂದಪಾಶ ಶಹಾಪುರ ಒತ್ತಾಯಿಸಿದ್ದಾರೆ.