ಬೇಸಿಗೆ ನೀರಿನ ಸಮಸ್ಯೆ ನಿವಾರಣೆಗೆ ಒತ್ತಾಯ
ಆಳಂದ: ಪಟ್ಟಣದಲ್ಲಿ ಪ್ರಸಕ್ತ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ಲತಾಕುಮಾರಿ ಅವರಿಗೆ ಸ್ಥಳೀಯ ಪುರಸಭೆ ಸದಸ್ಯರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಅಮರ್ಜಾ ಅಣೆಕಟ್ಟೆಯಲ್ಲಿ ನೀರಿನ ಕೊರತೆಯಾಗಿ ಪಟ್ಟಣದ ಜನತೆಗೆ ನೀರಿನ ಸರಬರಾಜು ಸಮರ್ಪಕವಾಗಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಗಂಭೀರವಾಗಿ ಪರಿಗಣಿಸಿ ಪರಿಹಾರ ಒದಗಿಸಬೇಕು. ಅಲ್ಲದೆ, ಲಾಡ್ಲೆ ಮಶಾಕ್ ದರ್ಗಾ ಉರುಸ್ ಸಮೀಪಿಸುತ್ತಿದೆ.
ವಿವಿಧ ಭಾಗಳಿಂದ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸುತ್ತಿದ್ದು, ಅವರಿಗೆ ನೀರಿನ ಅನುಕೂಲಕ್ಕಾಗಿ ತಕ್ಷಣವೇ ಬೋರ್ವೆಲ್ ವ್ಯವಸ್ಥೆಗೊಳಿಸಬೇಕು ಎಂದು ಆಗ್ರಹಿಸಿದರು. ಬೇಡಿಕೆ ಮನವಿ ಪತ್ರ ಸ್ವೀಕರಿಸಿದ ಲತಾಕುಮಾರಿ ಅವರು ತಮ್ಮ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ, ಪುರಸಭೆ ಉಪಾಧ್ಯಕ್ಷ ಹಮ್ಮಿದ್ ಅನ್ಸಾರಿ, ಸದಸ್ಯ ಗುರುನಾಥ ಷಣ್ಮೂಖ, ಸ್ಥಾಯಿ ಸಮಿತಿ ಅಧ್ಯಕ್ಷ ಗುಲಾಮ ಹುಸೇನ್ ಟಪ್ಪೇವಾಲೆ, ರಸೀದ್ ಅನ್ಸಾರಿ, ಚಂದ್ರಕಾಂತ ಪಾಟೀಲ್, ಅಯೂಬಅಲಿ ರೋತೆ, ಶಿವಾ ನಾಗೂರೆ ಇದ್ದರು.