ಹೆಚ್ಚುಅಕ್ಕಿ ದಾಸ್ತಾನು ವಿರುದ್ಧ ಕ್ರಮ: ಡಿಸಿ
ಯಾದಗಿರಿ: ರೈಸ್ ಮಿಲ್‌ಗಳ ಮಾಲೀಕರು ಹಾಗೂ ಸಗಟು ವ್ಯಾಪಾರಿಗಳು ಬತ್ತ ಮತ್ತು ಅಕ್ಕಿಯನ್ನು ಮಿತಿಮೀರಿ ದಾಸ್ತಾನು ಮಾಡಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕರ್ನಾಟಕ ಅವಶ್ಯಕ ವಸ್ತುಗಳ ಪರವಾನಗಿ ನಿಯಮಗಳ ಅನ್ವಯ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ತಿಳಿಸಿದ್ದಾರೆ. ರೈಸ್ ಮಿಲ್ ಮಾಲೀಕರು ಮತ್ತು ಸಗಟು ವ್ಯಾಪಾರಿಗಳು ಬತ್ತ ಮತ್ತು ಅಕ್ಕಿಯನ್ನು ಮಿತಿ ಮೀರಿ ದಾಸ್ತಾನು ಮಾಡಿರುವುದರಿಂದ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ತೀವ್ರವಾಗಿ ಏರಿಕೆ ಕಂಡಿದೆ. ಇದನ್ನು ತಡೆಗಟ್ಟುವ ಸಂಬಂಧ ಕರ್ನಾಟಕ ಅಗತ್ಯ ವಸ್ತುಗಳ(ಲೈಸನ್ಸಿಂಗ್) ಆದೇಶ 1986ರನ್ವಯ ದಾಸ್ತಾನುಗಳ ಮಿತಿಯನ್ನು ನಿಗದಿಪಡಿಸಿದ್ದು ಬತ್ತ ಹಾಗೂ ಅಕ್ಕಿಯ ಗರಿಷ್ಠ ದಾಸ್ತಾನು ಮಿತಿಯನ್ನು ನಿಗದಿಪಡಿಸಿ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
ದಾಸ್ತಾನು ಮಿತಿ ಎಷ್ಟೆಷ್ಟು?: ಚಿಲ್ಲರೆ ವರ್ತಕರು ಅಕ್ಕಿಯನ್ನು 50 ಕ್ವಿಂಟಲ್ ಹಾಗೂ ಸಗಟು ಮಾರಾಟಗಾರರು 2 ಸಾವಿರ ಕ್ವಿಂಟಲ್ ದಾಸ್ತಾನು ಇಟ್ಟುಕೊಂಡಿರಬಹುದು. ಸಗಟು ಮಾರಾಟಗಾರರು 3 ಸಾವಿರ ಕ್ವಿಂಟಲ್ ಬತ್ತವನ್ನು ದಾಸ್ತಾನಿಟ್ಟುಕೊಂಡಿರಬಹುದು. ರೈಸ್‌ಮಿಲ್‌ಗಳು ಹಿಂದಿನ ಎರಡು ವರ್ಷಗಳಲ್ಲಿ ಅತಿ ಹೆಚ್ಚು ವಹಿವಾಟಾದ ತಿಂಗಳಲ್ಲಿ ಆದ ವಹಿವಾಟಿನಷ್ಟು ದಾಸ್ತಾನು ಹಾಗೂ ಹೊಸ ಮಿಲ್ ಆಗಿದ್ದಲ್ಲಿ ಪ್ರಸ್ತಾಪಿತ ಸಾಮರ್ಥ್ಯದ ಶೇ.75ರಷ್ಟು ದಾಸ್ತಾನು ಇಟ್ಟುಕೊಳ್ಳಬಹುದು. ಈ ದಾಸ್ತಾನು ಮಿತಿಯನ್ನು ಮೀರಿದ ಪ್ರಕರಣಗಳಲ್ಲಿ ಅಂತಹ ಅಕ್ಕಿ ಗಿರಣಿಗಳು ಮತ್ತು ಸಗಟು ವರ್ತಕರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.
ನಾಳೆ 'ಇತಿಹಾಸ ಪರಂಪರೆ ಉಳಿಸಿ'
ಯಾದಗಿರಿ: ಕರ್ನಾಟಕ ಇತಿಹಾಸ ಅಕಾಡೆಮಿ ಹಾಗೂ ಹುಣಸಗಿ ಪೊಲೀಸ್ ಪಾಟೀಲ್ ಪ್ರತಿಷ್ಠಾನದ ಸಹಯೋಗದಲ್ಲಿ ಇಲ್ಲಿಯ ರಾಜೀವ ಗಾಂಧಿ ನಗರದ ಲಿಂಗರಾಜ ಸ್ಮಾರಕ ಪ್ರೌಢಶಾಲೆಯಲ್ಲಿ ಫೆ. 2ರಂದು ಬೆಳಗ್ಗೆ 9ಕ್ಕೆ ಇತಿಹಾಸ ಪರಂಪರೆ ಉಳಿಸಿ ಕಾರ್ಯಕ್ರಮ ಹಾಗೂ ಪ್ರಾಚೀನ ನಾಣ್ಯಗಳು, ತಾಳೆ ಗರಿಗಳು, ಹಸ್ತಪ್ರತಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಮಾರಂಭವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಜರ್ ಹುಸೇನ್ ಉದ್ಘಾಟಿಸುವರು. ಅತಿಥಿಗಳಾಗಿ ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಬಿಆರ್‌ಸಿ ಮಾರುತಿ ಹುಜರಾತಿ, ಭೀಮನಗೌಡ ಪಾಟೀಲ್ ಆಗಮಿಸುವರು. ಇತಿಹಾಸ ಪರಂಪರೆ ಉಳಿಸಿ ಕುರಿತು ಗುರುಮಠಕಲ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಎಸ್. ಯಾಳಗಿ ಉಪನ್ಯಾಸ ನೀಡುವರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿನೋದ ಸಿರಗೋಳ್ ಅಧ್ಯಕ್ಷತೆ ವಹಿಸುವರು. ಇತಿಹಾಸ ಪ್ರಿಯರು ಸೇರಿದಂತೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪಾಟೀಲ್ ಬಸನಗೌಡ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.