ಕೋರ್ಟ್ ಆದೇಶವಿದ್ದರೂ ಕಾಲೇಜಿನತ್ತ ಸರ್ಕಾರದ ನಿರ್ಲಕ್ಷ್ಯ
ಕ.ಪ್ರ.ವಾರ್ತೆ , ಯಾದಗಿರಿ ,ಜು.1
ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಪದವಿ ಮಹಾವಿದ್ಯಾಲಯ ಸುಧಾರಿಸುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯ ಕಂಡು ಕೋರ್ಟ್ ಸೂಕ್ತ ಸೌಲಭ್ಯ ಒದಗಿಸಬೇಕೆಂದು ಆದೇಶಿಸಿದ್ದರೂ ಪದವಿ ಕಾಲೇಜು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, 90ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರೇ ಕಾಲೇಜಿಗೆ ಆಧಾರ.
ಜಿಲ್ಲಾ ಕೇಂದ್ರದಲ್ಲಿರುವ ಏಕೈಕ ಸರ್ಕಾರಿ ಪದವಿ ಕಾಲೇಜು ಇದಾಗಿದ್ದು, ವಿದ್ಯಾರ್ಥಿಗಳು ಅನಿವಾರ್ಯವಾಗಿ ಪ್ರವೇಶ ಪಡೆಯುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳ ಸಂಖ್ಯೆಗೆ ಇಲ್ಲಿ ಕೊರತೆಯಿಲ್ಲ. ಆದರೆ ಬಾಕಿ ಎಲ್ಲವೂ ಕೊರತೆ ಪಟ್ಟಿಯಲ್ಲಿವೆ. ಕಟ್ಟಡದ ಸ್ಥಿತಿಯಂತೂ ಚಿಂತಾಜನಕ. ಕಾಲೇಜಿನಲ್ಲಿ ನಡೆದಾಡುವಾಗ ಎಡವಿ ಬೀಳುವಂತಿದೆ. ಪ್ರಯೋಗಾಲಯ, ಗ್ರಂಥಾಲಯ ಸೇರಿದಂತೆ ಯಾವ ವ್ಯವಸ್ಥೆಯೂ ಇಲ್ಲ. ಕಾಲೇಜು ಕಟ್ಟಡಕ್ಕೆ ಸೂಕ್ತ ಕಾಂಪೌಂಡ್ ಇಲ್ಲದೆ, ರಾತ್ರಿ ಪುಂಡ ಪೋಕರಿಗಳು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತಾಗಿದೆ.
ನ್ಯಾಯಮೂರ್ತಿಗಳ ಪ್ರಯತ್ನವೂ ವಿಫಲ: ಕಳೆದ ಆಗಸ್ಟ್‌ನಲ್ಲಿ “OÚ«ÚsÚ®Úúڒ¥ÚÆÇ ಕಾಲೇಜಿನ ದುಸ್ಥಿತಿ ಕುರಿತು ಪ್ರಕಟವಾಗಿದ್ದ “ÔÛÈÚâ ಚೇಳುಗಳಿರಬಹುದು ÔÚßÎÛÁÚß...!‘ ಎಂಬ ವರದಿ ನೋಡಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನದಾಸ್ ಹಾಗೂ ಎಲ್.ನಾರಾಯಣಸ್ವಾಮಿ ಅವರು ಕಾಲೇಜಿಗೆ ಭೇಟಿ ನೀಡಿದ್ದರು. ನಂತರ ಕಾನೂನು ಸೇವಾ ಪ್ರಾಧಿಕಾರದಲ್ಲಿ ದೂರು ದಾಖಲಿಸಿಕೊಂಡು ಸರ್ಕಾರದ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಅಧಿಕಾರಗಳನ್ನು ನ್ಯಾಯಾಲಯಕ್ಕೆ ಎಳೆದಿದ್ದರು. ಆದರೆ ಕೋರ್ಟಿನಲ್ಲಿ ಸೌಲಭ್ಯ ಕಲ್ಪಿಸುವುದಾಗಿ ಹೇಳಿದ ಸರ್ಕಾರವಿನ್ನೂ ಈ ಕಡೆ ಮುಖ ಮಾಡಿಲ್ಲ.
ಬೋಧಕರೇ ಇಲ್ಲ: ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗವನ್ನು ಹೊಂದಿರುವ ಜಿಲ್ಲಾ ಕೇಂದ್ರದ ಏಕೈಕ ಕಾಲೇಜಿದು. ಇದರೊಂದಿಗೆ ಎರಡು ವರ್ಷಗಳಿಂದ ಸ್ನಾತಕೋತ್ತರ ಕೇಂದ್ರವನ್ನೂ ಆರಂಭಿಸಲಾಗಿದೆ. 8 ಪಿಜಿ ಕೋರ್ಸ್‌ಗಳನ್ನು ಆರಂಭಿಸಲಾಗಿದ್ದು, ಕಾಲೇಜಿನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆದರೆ ಪದವಿ ತರಗತಿಗೆ ಇದ್ದಷ್ಟೇ ಉಪನ್ಯಾಸಕರು ಈಗಲೂ ಇದ್ದು, ಸ್ನಾತಕೋತ್ತರ ವಿಭಾಗಕ್ಕೆ ಪ್ರತ್ಯೇಕ ಬೋಧಕರನ್ನು ನೀಡಿಲ್ಲ. ಇದರಿಂದ ತರಗತಿ ನಡೆಸುವುದೇ ದೊಡ್ಡ ಸಮಸ್ಯೆಯಾಗಿದೆ.
90 ಅತಿಥಿ ಉಪನ್ಯಾಸಕರೇ ಆಧಾರ: ಕಾಲೇಜಿನಲ್ಲಿ ಕಾಯಂ ಉಪನ್ಯಾಸಕರ ಸಂಖ್ಯೆ ಕೇವಲ 18. ಕನ್ನಡ ವಿಭಾಗಕ್ಕೆ 12, ವಾಣಿಜ್ಯ ವಿಭಾಗಕ್ಕೆ 15, ಕಂಪ್ಯೂಟರ್ ವಿಜ್ಞಾನಕ್ಕೆ 16, ಇಂಗ್ಲಿಷ್ 4, ಗಣಿತಕ್ಕೆ 7, ಇತಿಹಾಸಕ್ಕೆ 8, ಎಂಎಸ್‌ಡಬ್ಲ್ಯೂ 6, ಹಿಂದಿ 5, ಭೌತಶಾಸ್ತ್ರ ವಿಭಾಗಕ್ಕೆ 4 ಸೇರಿದಂತೆ ಸುಮಾರು 90ಕ್ಕೂ ಹೆಚ್ಚು ಉಪನ್ಯಾಸಕರ ಕೊರತೆಯಿದೆ. ಅಗತ್ಯವಿರುವ ಬೋಧಕರನ್ನು ಈಗ ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಿ ಕೊಳ್ಳಲಾಗುತ್ತಿದೆ.
ಹೇಳಿದವರು ನಾಪತ್ತೆ: ಸಂಸದ ಎಸ್.ಫಕೀರಪ್ಪ ತಮ್ಮ ಅನುದಾನದಲ್ಲಿ 1 ಕೋಟಿ ನೀಡುವುದಾಗಿ ಭರವಸೆ ನೀಡಿದ್ದರು. ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ರಾಜುಗೌಡ ಅವರೂ ಅನುದಾನ ಒದಗಿಸಿಕೊಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ, 50 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದೂ ಹೇಳಿದ್ದರು. ಆದರೆ ನಯಾಪೈಸೆಯೂ ಬಿಡುಗಡೆಯಾಗಿಲ್ಲ. ಪದವಿ ಕಾಲೇಜಿನ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ.
-ನಾರಾಯಣ ಹೆಗಡೆ