ನಮ್ಮೂರ ಶಾಲೆ ಮರದ ಕೆಳಗೆ!
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಜು.1
ತಾಲೂಕಿನ ಶಾಂಪುರಹಳ್ಳಿ ತಾಂಡಾದ ಶಾಲಾ ಕಟ್ಟಡದ ಕಾಮಗಾರಿ ಕಳೆದ ಮೂರು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಮಕ್ಕಳು ಗಿಡದ ಕೆಳಗೆ ಕುರಿತು ಪಾಠ ಪ್ರವಚನ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿರುವುದರಿಂದ ಕಟ್ಟಡ ಕಾಮಗಾರಿ ಬೇಗನೆ ಪೂರ್ಣಗೊಳಿಸಬೇಕು ಎಂದು ಕರವೇ ಗ್ರಾಮ ಘಟಕ ಅಧ್ಯಕ್ಷ ದೀಲಿಪ ರಾಠೋಡ, ತೆಂಗಳಿ ವಲಯ ಕರವೇ ಅಧ್ಯಕ್ಷ ವಿಶ್ವನಾಥ ಬೆಂಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
4 ಕೋಣೆಗಳ ಕೊರತೆ: ಶಾಂಪುರಹಳ್ಳಿ ತಾಂಡಾದಲ್ಲಿ 1ರಿಂದ 8ನೇ ತರಗತಿಗಳು ಇದ್ದು, 188 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲಿ 3 ಕೋಣಿಗಳಿದ್ದು 4 ಕೋಣೆಗಳ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ.
ಕಳೆದ ಮೂರು ವರ್ಷಗಳಿಂದ ನಾಲ್ಕು ಕೋಣೆಗಳನ್ನು ನಿರ್ಮಿಸಲು ಕಾಮಗಾರಿ ಪ್ರಾರಂಭಿಸಿದ್ದು, ಇನ್ನು ಮುಗಿಯುವ ಲಕ್ಷಣಗಳು ಇಲ್ಲ. ಈ ಬಗ್ಗೆ ಶಾಲೆ ಎಸ್‌ಡಿಎಂಸಿಯವರು ಗಮನ ಹರಿಸದೆ ಇರುವುದು ವಿಷಾದಕರ.
ಈ ಬಗ್ಗೆ ಹಲವಾರು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅವರು ತಾಲೂಕಿನ ಶಾಲೆಗಳಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸುವ ಮನಸ್ಸು ಮಾಡದೇ ಕಚೇರಿ ಕೆಲಸಕ್ಕೆ ಮಾತ್ರ ತಮ್ಮನ್ನು ಸಿಮೀತಗೊಳಿಸಿಕೊಂಡಿದ್ದಾರೆ. ಇದರಿಂದ ಇಲ್ಲಿನ ಮಕ್ಕಳು ಬಯಲಲ್ಲಿ ಕುಳಿತು ಪಾಠ ಕೇಳಬೇಕಾಗಿದೆ ಎಂದು ಆರೋಪಿಸಿದ್ದಾರೆ.
ಈಗ ಮಳೆಗಾಲ ಇರುವುದರಿಂದ ಅವರ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದೆ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಆದಷ್ಟು ಬೇಗನೆ ಶಾಲಾ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಶಾಲೆಗೆ ಬೀಗಮುದ್ರೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
--