ರಸ್ತೆಗಳ ಸುಧಾರಣೆಗೆ ಪ್ರಸ್ತಾವನೆ ಸಲ್ಲಿಕೆ: ಶಾಸಕ ಡಾ. ಜಾಧವ
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಜು.1
ತಾಲೂಕಿನ ರಸ್ತೆಗಳ ಸುಧಾರಣೆಗಾಗಿ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಡಾ. ಉಮೇಶ ಜಾಧವ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹಾಪುರ- ಶಿವರಾಮಪುರ ರಾಜ್ಯ ಹೆದ್ದಾರಿಯ ಅಧೀನದಲ್ಲಿ ಬರುವ ಚಿಂಚೋಳಿ(ಎಚ್), ಕಾಳಗಿ ಕೊಡದೂರ್, ಮಂಗಲಗಿ, ಭೂತಪುರ, ಶಾದೀಪುರ, ಚಿಂದಾನೂರ, ಕುಂಚಾವರಂ, ಶಿವರಾಮಪುರ 56.06 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 23.59 ಕೋಟಿ ಮಂಜೂರಿಯಾಗಿದ್ದು, ಟೆಂಡರ್ ಕರೆಯಲಾಗಿದೆ. ತಾಂತ್ರಿಕ ಮಂಜೂರು ದೊರೆಯಬೇಕಾಗಿದೆ ಎಂದರು.
ಭಾಲ್ಕಿ- ಚಿಂಚೋಳಿ ರಾಜ್ಯ ಹೆದ್ದಾರಿ ಮಾರ್ಗದಲ್ಲಿ ಬರುವ ಚೆನ್ನೂರ, ಗಡಿಲಿಂಗದಳ್ಳಿ, ರಾಣಾಪುರ, ನರನಾಳ, ಕರಕಮುಕಳಿ, ಚಿಮ್ಮಇದಲಾಯಿ ಕ್ರಾಸ್ ಒಟ್ಟು 34.6 ಕಿ.ಮೀ. ರಸ್ತೆ ಅಭಿವೃದ್ಧಿಗೆ 32..51 ಕೋಟಿ ಮಂಜೂರಿಯಾಗಿದೆ. ನಬಾರ್ಡ್ ಯೋಜನೆ ಅಡಿಯಲ್ಲಿ ಸಾಲೇಬೀರನಳ್ಳಿ- ತುಮಕುಂಟಾ 5 ಕಿ.ಮೀ. ರಸ್ತೆ ಅಭಿವೃದ್ಧಿಗೆ 150 ಲಕ್ಷ ನೀಡಲಾಗಿದೆ ಎಂದು ಹೇಳಿದರು.
ಕೇಂದ್ರ ಸಾರಿಗೆ ಸಚಿವ ಆಸ್ಕರ್ ಫರ್ನಾಂಡಿಸ್ ಗುಲ್ಬರ್ಗ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಾವು ಅವರಿಗೆ ಭೇಟಿ ಮಾಡಿ ತಾಲೂಕಿನ ಕೆಲವು ರಸ್ತೆಗಳನ್ನು ಸಿಆರ್‌ಎಫ್ ಯೋಜನೆ ಅಡಿಯಲ್ಲಿ ಮಂಜೂರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಕೋಡ್ಲಿ ಗ್ರಾಮದಿಂದ ಮಾಡಬೂಳ ಕ್ರಾಸ್‌ವರೆಗೆ ಮತ್ತು ಕೊಳ್ಳೂರು- ಕುಸರಂಪಳ್ಳಿ ಮತ್ತು ನಂಜುಂಡಪ್ಪ ಅನುಷ್ಠಾನ ಯೋಜನೆ ಅಡಿಯಲ್ಲಿ ಚಿಂಚೋಳಿ-ನಾವದಗಿ ಸೂರವಾರ ರಸ್ತೆ ಅಭಿವೃದ್ಧಿಗೆ 236 ಲಕ್ಷ ಮಂಜೂರಿಯಾಗಿದೆ ಎಂದು ಶಾಸಕರು ತಿಳಿಸಿದರು.
ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಿ: ಜಾಧವ
ಚಿಂಚೋಳಿ: ತಾಲೂಕಿನಲ್ಲಿ ಕೈಗೊಂಡಿರುವ ರಸ್ತೆ ಡಾಂಬರೀಕರಣ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಮತ್ತು ಕಾಮಗಾರಿಗಳನ್ನು ಗುಣಮಟ್ಟದಿಂದ ನಡೆಸಬೇಕು ಎಂದು ಶಾಸಕ ಡಾ. ಉಮೇಶ ಜಾಧವ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ತಾಲೂಕಿನ ಮಿರಿಯಾಣ ಚಿಂಚೋಳಿ ರಾಜ್ಯ ಹೆದ್ದಾರಿ ಮಾರ್ಗದಲ್ಲಿ ಬರುವ ಕಲ್ಲೂರ ರೋಡ ಗ್ರಾಮದಲ್ಲಿ ನಡೆಯುತ್ತಿರುವ ಸೇತುವೆ ಮತ್ತು ರಸ್ತೆ ಡಾಂಬರೀಕರಣ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿ ಮತ್ತು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿಯೇ ಗಡಿಭಾಗಕ್ಕೆ ಹೊಂದಿಕೊಂಡಿರುವ ತಾಲೂಕಿನಲ್ಲಿ ಅನೇಕ ರಸ್ತೆಗಳು ತುಂಬಾ ಹದಗೆಟ್ಟಿವೆ. ರಸ್ತೆ ಅಭಿವೃದ್ಧಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಅನುಕೂಲಮಾಡಿಕೊಡಬೇಕು ಎಂದು ತಾಕೀತು ಮಾಡಿದರು.