ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಂಗನವಾಡಿ ನೌಕರರಿಗೆ ಸೌಲಭ್ಯ: ಉಮಾಶ್ರೀ

Lingaraj Badiger
Updated On : 3 Jul 2013, 11:46 am

ಕ.ಪ್ರ. ವಾರ್ತೆ  ಯಾದಗಿರಿ  ಜು.2
ಕಳೆದ 20 ವರ್ಷಗಳಿಂದಲೂ ಪರಿಷ್ಕರಣೆ ಮಾಡದೇ ಉಳಿದಿದ್ದ, ಅಂಗನವಾಡಿ ನೌಕರರ ವಿವಿಧ ಪ್ರಮುಖ ಸೌಕರ್ಯಗಳ ಆದೇಶಗಳನ್ನು ಹಂತಹಂತವಾಗಿ ಪರಿಷ್ಕರಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಅವರು ಆಲ್ ಇಂಡಿಯಾ ಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘಕ್ಕೆ ಭರವಸೆ ನೀಡಿದ್ದಾರೆ.
ಸಂಘದ ರಾಜ್ಯ ಪದಾಧಿಕಾರಿಗಳ ನಿಯೋಗ ಇತ್ತೀಚೆಗೆ ಸಚಿವರನ್ನು ಭೇಟಿಯಾಗಿ ಈ ಸಂಬಂಧವಾಗಿ ಮನವಿ ಪತ್ರ ಸಲ್ಲಿಸಿತು. ತೀವ್ರ ಸ್ವರೂಪದ ಮತ್ತು ದುಬಾರಿ ವೆಚ್ಚದ ಚಿಕಿತ್ಸೆ ಬೇಕಾಗುವ ಕಾಯಿಲೆಗಳಾದ ಕ್ಯಾನ್ಸರ್, ಮೂತ್ರಪಿಂಡ, ಗರ್ಭಕೋಶ ಸಂಬಂಧಿ ಮತ್ತಿತರ 9 ಗಂಭೀರ ಕಾಯಿಲೆಗಳಿಗೆ ತುತ್ತಾದ ಕಾರ್ಯಕರ್ತೆ ಮತ್ತು ಸಹಾಯಕಿ ಇಬ್ಬರಿಗೂ ಈಗಿರುವ ಎರಡು ರೀತಿಯ 20 ಸಾವಿರ ಮತ್ತು 10 ಸಾವಿರ ಕನಿಷ್ಠ ಪರಿಹಾರದ ಮೊತ್ತವನ್ನು ಪರಿಷ್ಕರಿಸಬೇಕು.
ಸಚಿವರ ಸ್ಪಂದನೆ: ಇಬ್ಬರಿಗೂ ಒಂದೇ ದರದಲ್ಲಿ ಗರಿಷ್ಠ ಪರಿಹಾರದ ಹಣ ನಿಗದಿ ಮಾಡಿ ಅದನ್ನು 50 ಸಾವಿರಕ್ಕೆ ಹೆಚ್ಚಿಸಬೇಕು ಎನ್ನುವ ಸಂಘದ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ವೈದ್ಯಕೀಯ ವೆಚ್ಚ ಮತ್ತು ಸೇವಾವಧಿಯಲ್ಲಿ ಮರಣ ಹೊಂದಿದ ಇಬ್ಬರೂ ನೌಕರರ ಕುಟುಂಬಕ್ಕೆ ಈಗಿರುವ 10 ಸಾವಿರ ಪರಿಹಾರವನ್ನೂ ಹೆಚ್ಚಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಸಂಘ ತಿಳಿಸಿದೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಇಲಾಖೆ ನಿರ್ದೇಶಕಿ ಗುರುನೀತ್ ತೇಜ್ ಮೆನನ್, ಅಂಗನವಾಡಿ ಕೇಂದ್ರಗಳ ಬಾಡಿಗೆಗೆ ಈಗಿರುವ ಕನಿಷ್ಠ ದರಗಳನ್ನು ಈಗಿನ ಮಾರುಕಟ್ಟೆ ದರದಂತೆ ಹೆಚ್ಚಿಸಲಾಗುವುದು. ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆ ಮಾಸಿಕವಾಗಿ ನೀಡುತ್ತಿರುವ ಹಣವನ್ನು ಈಗಿರುವ 50 ಮತ್ತು ಉರುವಲು ಕಟ್ಟಿಗೆ ಖರೀದಿಸಲು ಈಗ ನೀಡುತ್ತಿರುವ ಮಾಸಿಕ 100ನ್ನು ಸಹ ಹೆಚ್ಚಿಸುವ ಭರವಸೆ ನೀಡಿದ್ದಾರೆ.
ಸಭೆ ನಡೆಸಲು ನಿರ್ದೇಶನ: ಪ್ರತಿ ಕೇಂದ್ರದಲ್ಲೂ ಖುರ್ಚಿ, ಮೇಜು, ಕುಡಿಯುವ ನೀರು ಮತ್ತು ಶೌಚಾಲಯ ಸೌಕರ್ಯ ಕಲ್ಪಿಸಲು ಸೂಕ್ತ ಕ್ರ ಕೈಗೊಳ್ಳುವುದು. ಸೌಲಭ್ಯವಿರುವ ಸ್ಥಳಗಳಲ್ಲಿ ನೌಕರರ ಮಾಸಿಕ ಹಾಗೂ ವಲಯ ಸಭೆಗಳನ್ನು ನಡೆಸಲು ಜಿಲ್ಲೆಗಳಿಗೆ ಮತ್ತು ತಾಲೂಕುಗಳಿಗೆ ನಿರ್ದೇಶನ ನೀಡಲಾಗುವುದೆಂದು ಸಂಘದ ರಾಜ್ಯ ಪದಾಧಿಕಾರಿಗಳ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಜು.15ರೊಳಗಾಗಿ ಸಭೆ: ಸಿ ಮತ್ತು ಡಿ ಗ್ರೂಪ್‌ನ ಸರ್ಕಾರಿ ನೌಕರರಿಗೆ ನೀಡುವ ದರದಲ್ಲೇ ಅಂಗನವಾಡಿ ನೌಕರರಿಗೆ ದಿನಭತ್ಯೆ ಮತ್ತು ಪ್ರಯಾಣ ಭತ್ಯೆ ನೀಡಬೇಕೆಂಬ ಆದೇಶವಿದ್ದರೂ ಅತ್ಯಂತ ಕಡಿಮೆ 30 ದಿನಭತ್ಯೆ ನೀಡುತ್ತಿರುವುದು, ಹೆಚ್ಚುವರಿ ಕೇಂದ್ರದ ಪ್ರಭಾರ ವಹಿಸಿಕೊಂಡಿರುವುದಕ್ಕೆ ಮಾಸಿಕ ಕೇವಲ 50 ನೀಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಇವುಗಳನ್ನು ಪರಿಷ್ಕರಿಸಿ ಹೆಚ್ಚಿಸಲಾಗುವುದು ಎಂದು ಕೂಡ ಸಂಘಕ್ಕೆ ಭರವಸೆಯನ್ನು ನೀಡಿದ್ದಾರೆ. ಈ ಕುರಿತು ವಿವರವಾಗಿ ಚರ್ಚಿಸಲು ಜು.15ರೊಳಗಾಗಿ ಸಂಘದ ಪದಾಧಿಕಾರಿಗಳೊಂದಿಗೆ ಸಭೆಯನ್ನು ಆಯೋಜಿಸುವುದಾಗಿ ಅವರು ಭರವಸೆ ನೀಡಿದ್ದಾರೆ.       
ಸಂಘದಿಂದ ಅಭಿನಂದನೆ: ಸಂಘದಿಂದ ಸಲ್ಲಿಸಲಾದ ಮನವಿ ಪತ್ರದಲ್ಲಿನ ಪ್ರಮುಖ ಬೇಡಿಕೆಗಳನ್ನು ಪರಿಹರಿಸಲು ಮುಂದಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯ ಮತ್ತು ಇಲಾಖೆಯ ಕ್ರಮವನ್ನು ಸಂಘವು ಸ್ವಾಗತಿಸುತ್ತದೆ. ಅದಕ್ಕಾಗಿ ಸಂಘವು ಇಲಾಖೆಯನ್ನು ಅಭಿನಂದಿಸುತ್ತದೆ. ಭರವಸೆ ನೀಡಿರುವಂತೆ ಶೀಘ್ರದಲ್ಲೇ ಸಭೆಯನ್ನು ಕರೆದು ಪದಾಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲ ಬೇಡಿಕೆಗಳ ಕುರಿತು ಶೀಘ್ರದಲ್ಲೇ ಅಧಿಕೃತವಾಗಿ ಸೂಕ್ತ ಆದೇಶಗಳನ್ನು ಹೊರಡಿಸಬೇಕೆಂದು ಸಂಘವು ಸರ್ಕಾರವನ್ನು ಆಗ್ರಹಿಸುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement