ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎನ್ವಿ ಸಂಸ್ಥೆ, ಶಿಕ್ಷಣ ಇಲಾಖೆಗೆ ನೋಟಿಸ್

Lingaraj Badiger
Updated On : 3 Jul 2013, 11:41 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.2
ಶಾರದಾ ಲೋಕ ಕಲ್ಯಾಣ ಟ್ರಸ್ಟ್ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹಣ ಸಂಗ್ರಹ ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ನಡೆಸಿದ ನೇಮಕಾತಿ ವಿಚಾರಗಳನ್ನು ಮುಂದಿಟ್ಟುಕೊಂಡು ಇಲ್ಲಿನ ನೂತನ ವಿದ್ಯಾಲಯ ಸಂಸ್ಥೆಯ ವಿರುದ್ಧ ಆ ಸಂಸ್ಥೆಯ ಅಜೀವ ಸದಸ್ಯ ಹಾಗೂ ಆಡಳಿತ ಮಂಡಳಿಯ ಮಾಜಿ ಸದಸ್ಯ ಕೈಲಾಸನಾಥ ದೀಕ್ಷಿತ್ 2011ರಲ್ಲಿ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ವಿಚಾರಣೆ ನಡೆಯಲಿದೆ.
ಈ ದೂರಿನ ಆಧಾರದಲ್ಲಿ ಲೋಕಾಯುಕ್ತ(ವಿಚಾರಣೆ) ಹೆಚ್ಚುವರಿ ರೆಜಿಸ್ಟ್ರಾರ್ ಎ.ಆರ್. ದೇಶಪಾಂಡೆ ಅವರು ಜು.11ರಂದು ಬೆ.11ಕ್ಕೆ ಗುಲ್ಬರ್ಗದಲ್ಲಿ ಲೋಕಾಯುಕ್ತರ ಸಮ್ಮುಖದಲ್ಲಿ ಹಾಜರಿರುವಂತೆ ಸದರಿ ಪ್ರಕರಣಕ್ಕೆ ಸಂಬಂಧಿಸಿರುವವರಿಗೆ ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ದೀಕ್ಷಿತ ಇವರು ಎನ್ವಿ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಹಲವು ಆರೋಪಗಳನ್ನು ಮಾಡಿ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇವರು 2005ರಿಂದ 2010ರವರೆಗೂ ಆ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾಗಿದ್ದರು.
ದಾಖಲೆ ಪತ್ರ ಸಲ್ಲಿಕೆ: ವಿದ್ಯಾರ್ಥಿಗಳಿಂದ ಹಣ ಸಂಗ್ರಹ ಯಾವ ಕಾರಣಕ್ಕೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ದೂರಿನಲ್ಲಿ ಹೇಳಿರುವ ಕೈಲಾಸನಾಥ ದೀಕ್ಷಿತ್ ಈ ಸಂಬಂಧ ಲೋಕಾಯುಕ್ತಕ್ಕೆ ಅಗತ್ಯವಿರುವ ಎಲ್ಲ ದಾಖಲೆಪತ್ರ ನೀಡಿದ್ದನ್ನು ಸ್ಮರಿಸಬಹುದಾಗಿದೆ. ಇದಲ್ಲದೆ ಎನ್ವಿ ಸಂಸ್ಥೆ ಸರ್ಕಾರದ ಅನುದಾನಿತ ಸಂಸ್ಥೆ. ಸರ್ಕಾರದ ಅನುದಾನ ಪಡೆಯುವ ಸಂಸ್ಥೆ ಸರ್ಕಾರದ ಶಿಕ್ಷಣ ನೀತಿಗಳಿಗೆ ತದ್ವಿರುದ್ಧವಾಗಿ ನೇಮಕಾತಿ ನೀತಿ ಅನುಸರಿಸುತ್ತಿರುವುದನ್ನೂ ಸಹ ದೂರಿದ್ದಾರೆ.
11ರಂದು ವಿಚಾರಣೆ: ಇದೀಗ ಲೋಕಾಯುಕ್ತರು ಈ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿದ್ದು ಜು.11ರಂದು ಗುಲ್ಬರ್ಗದ ತಮ್ಮ ಭೇಟಿಯ ಸಂದರ್ಭದಲ್ಲೇ ಹಾಜರಿರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಎನ್ವಿ ಸಂಸ್ಥೆ ಆಡಳಿತಾಧಿಕಾರಿ, ಅಧ್ಯಕ್ಷರು, ದೂರುದಾರ ಕೈಲಾಸನಾಥ ದೀಕ್ಷಿತರಿಗೆ ಸೂಚಿಸಿದ್ದಾರೆ. ಇದರಿಂದಾಗಿ ಎನ್ವಿ ಸಂಸ್ಥೆ, ಶಿಕ್ಷಣ ಇಲಾಖೆ ಬಗ್ಗೆ ಆರಂಭವಾಗಲಿರುವ ಲೋಕಾಯುಕ್ತ ವಿಚಾರಣೆ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿದೆ. ಸುಮಾರು 2 ವರ್ಷಗಳ ನಂತರ ಸದರಿ ಪ್ರಕರಣ ವಿಚಾರಣೆಗೆ ಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement