ಕಾಲು ಜಾರಿ ಬಾವಿಗೆ ಬಿದ್ದು ಮಹಿಳೆ ಸಾವು
ಗುಲ್ಬರ್ಗ: ಶರಣಸಿರಸಗಿ ಗ್ರಾಮದ ಬಾವಿಯೊಂದರಲ್ಲಿ ನೀರು ಕುಡಿಯಲು ಹೋದ ಮಹಿಳೆಯೊಬ್ಬಳು ಕಾಲು ಜಾರಿ ಬಿದ್ದು, ಸಾವಿಗೀಡಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಕಾಶಿಬಾಯಿ ಗಂಡ ಮಲ್ಲಪ್ಪ ಕವರಿ ಎಂಬ ಮಹಿಳೆಯೇ ಮೃತ ದುರ್ದೈವಿ. ಕಾಶಿಬಾಯಿ ಮಧ್ಯಾಹ್ನ ಭಾವಿಯಲ್ಲಿ ನೀರು ಕುಡಿಯಲು ಹೋದಾಗ ಕಾಲು ಜಾರಿ ಬಿದ್ದು ಕೆಸರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಎಂದು ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿ ಸಾವು
ಗುಲ್ಬರ್ಗ: ಸ್ಟೌ ಸಿಡಿದ ಪರಿಣಾಮ ಮೈಗೆ ಬೆಂಕಿ ಹತ್ತಿ ಸುಟ್ಟ ಪರಿಣಾಮ, ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ತಾಜ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ.
ಚಿಂಚೋಳಿ ತಾಲೂಕಿನ ಚೆಂಗಟಾ ಗ್ರಾಮದ 18 ವರ್ಷದ ವಿದ್ಯಾರ್ಥಿ ಆಕಾಶ ತಂದೆ ಶಾಂತಕುಮಾರ ಎಂಬಾತ ತನ್ನ ಅಜ್ಜ ಅಜ್ಜಿಯರ ಗ್ರಾಮವಾದ ತಾಜಸುಲ್ತಾನಪುರಕ್ಕೆ ಬಂದಿದ್ದನು. ಜೂ. 27ರಂದು ಮಧ್ಯಾಹ್ನ ಚಹಾ ಮಾಡಲು ಸ್ಟೌ ಹತ್ತಿಸುವಾಗ ಆಕಸ್ಮಿಕವಾಗಿ ಅದು ಸಿಡಿದ ಪರಿಣಾಮ, ಆತನು ಧರಿಸಿದ ಬಟ್ಟೆಗಳಿಗೆ ಬೆಂಕಿ ಹತ್ತಿ ಮೈ ಸುಟ್ಟಿತ್ತು. ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಸೋಮವಾರ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರು ಕಳ್ಳರ ಸೆರೆ
ಗುಲ್ಬರ್ಗ: ರಾಘವೇಂದ್ರ ಮತ್ತು ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಅವರಿಂದ 4 ಲಕ್ಷ ಮೌಲ್ಯದ 12 ತೊಲಿ ಬಂಗಾರ ಜಪ್ತಿ ಮಾಡಿಕೊಂಡಿದ್ದಾರೆ. ಸುಲ್ತಾನಪುರ ಗ್ರಾಮದ ಮಯ್ಯಾ ಅಲಿಯಾಸ್ ಮಹೇಶ ತಂದೆ ರಾಜಶೇಖರ ಚಿಟಗುಪ್ಪಿ(35), ರಾಣೇಸ್ಪೀರ ದರ್ಗಾ ಆಶ್ರಯ ಕಾಲೋನಿಯ ಸೈಯದ್ ಶೇಖ್ ಅಲಿಯಾಸ್ ಸೈದ್ಯಾ ತಂದೆ ಬಾಬುಮಿಯಾ(20), ಕೋಳಿ ಮಲ್ಲ್ಯಾ ಎಂಬುವರು ಬಂಧಿತ ಕಳ್ಳರು.
ರಾಘವೇಂದ್ರ ನಗರ ಠಾಣೆ ವ್ಯಾಪ್ತಿಯಲ್ಲಿ ಜೂ.1ರಂದು ಸೂರ್ಯಕಾಂತ ಗುರುಲಿಂಗಪ್ಪ ಕಲಶೆಟ್ಟಿ ಎಂಬುವರ ಮನೆ, ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್ 21ರಂದು ನಿರ್ಮಲಾ ಶಿವಾನಂದ ತಡಕಲ್ ಎಂಬುವರ ಮನೆ ಕಳ್ಳತನವಾಗಿತ್ತು.
ಎಸ್ಪಿ, ಹೆಚ್ಚುವರಿ ಎಸ್ಪಿ, ಬಿ ಉಪ ವಿಭಾಗದ ಡಿಎಸ್ಪಿ ಎ.ಡಿ. ಬಸವಣ್ಣನವರ ಮಾರ್ಗದರ್ಶನದಲ್ಲಿ ಚೌಕ್ ಪಿಐ ಬಿ. ಬಿ. ಭಜಂತ್ರಿ ನೇತೃತ್ವದಲ್ಲಿ ಪಿಎಸ್ಐ ನಟರಾಜ, ಎಎಸ್ಐ ದಸ್ತಗೀರ, ಸಿಬ್ಬಂದಿ ಆಲೋಕ, ಗೋಪಾಲ್, ಚಂದ್ರಶೇಖರ, ಶಿವಕುಮಾರ, ಮಹಾಂತೇಶ, ಶಿವಾನಂದಸ್ವಾಮಿ, ಬಂದೇನವಾಜ್ ಅವರು ತನಿಖೆ ಕೈಗೊಂಡು ಆರೋಪಿಗಳನ್ನು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.