ಅಕ್ರಮ ಮರಳು ವಿರುದ್ಧ ಜಿಲ್ಲಾಡಳಿತ ಗುಡುಗು
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜು.3
ಗುಲ್ಬರ್ಗ ಜಿಲ್ಲೆಯ ಅಫಜಲ್ಪುರ, ಜೇವರ್ಗಿ, ಗುಲ್ಬರ್ಗ, ಚಿತ್ತಾಪುರ ಹಾಗೂ ಸೇಡಂ ತಾಲೂಕುಗಳಲ್ಲಿನ ಭೀಮಾ, ಕಾಗಿಣಾ, ಕಮಲಾವತಿ ನದಿ ಪಾತ್ರದಲ್ಲಿನ ಅಕ್ರಮ ಮರಳುಗಾರಿಕೆ ಯಾವುದೇ ಕಾರಣಕ್ಕೂ ಸಹಿಸಲಾಗದು. ಕಾನೂನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಕಾರ್ಯ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಹೇಳಿದ್ದಾರೆ.
ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಿಸರ್ಗದ ಬೆಲೆಬಾಳುವ ಮರಳು ನಿಕ್ಷೇಪ ಲೂಟಿಗೆ ತಾವು ಎಂದಿಗೂ ಅವಕಾಶ ನೀಡುವುದಿಲ್ಲ. ಎಲ್ಲಡೆ ಪೊಲೀಸ್, ಕಂದಾಯ, ಲೋಕೋಪಯೋಗಿ ಸೇರಿದಂತೆ ಹಲವಾರು ಇಲಾಖೆಗಳ ಸಮನ್ವಯ, ಸಹಕಾರದೊಂದಿಗೆ ಅಕ್ರಮ ಮರಳುಗಾರಿಕೆಯನ್ನು ನೂರಕ್ಕೆ ನೂರರಷ್ಟು ತಡೆಯುವುದಾಗಿ ಜಿಲ್ಲಾಧಿಕಾರಿ ಸಂಕಲ್ಪ ಮಾಡಿದ್ದಾರೆ.
ಸರ್ಕಾರದಿಂದಲೇ ಮರಳು ಮಾರಾಟ: ಜಿಲ್ಲೆಯಲ್ಲಿ ಜಿಲ್ಲಾಡಳಿತ ನಡೆಸುವ ದಾಳಿಗಳಲ್ಲಿ ಜಪ್ತಿಯಾಗುವ ಮರಳನ್ನೆಲ್ಲ ಸರ್ಕಾರದ ಯಾರ್ಡ್ನಲ್ಲಿ ದಾಸ್ತಾನು ಮಾಡಲಾಗುತ್ತಿದೆ. ಅದನ್ನು ನಿಯಮದಂತೆ ಮನೆ ಕಟ್ಟುವ ಕೆಲಸದಲ್ಲಿ ತೊಡಗಿರುವ ಸಾರ್ವಜನಿಕರಿಗೆ ಅಗತ್ಯ ದಾಖಲಾತಿಗಳ ಪರಿಶೀಲನೆ ನಂತರ ಕಾನೂನು ಪ್ರಕಾರ ಬೆಲೆ ನಿಗದಿ ಪಡಿಸಿ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಸನ್ನಕುಮಾರ್ ಮಾಹಿತಿ ನೀಡಿದರು.
ಕಳೆದ ಕೆಲವು ದಿನಗಳಿಂದ ಜಿಲ್ಲಾಡಳಿತ ನಡೆಸಿದ ದಾಳಿಯಲ್ಲಿ ದೊರಕಿರುವ 350 ಟ್ರಿಪ್ ಮರಳನ್ನು, ಸೇಡಂ ರಸ್ತೆಯ ಬುದ್ಧ ವಿಹಾರದ ಹಿಂಬಾಗದಲ್ಲಿನ 5 ಎಕರೆ ವಿಶಾಲವಾದ ಮೈದಾನದಲ್ಲಿ ದಾಸ್ತಾನು ಮಾಡಲಾಗಿದೆ. ಅಗತ್ಯವಿರುವ ಸಾರ್ವಜನಿಕರು ತಾವು ಪಾಲಿಕೆಯಿಂದ ಪಡೆದಿರುವ ಕಟ್ಟಡ ಪರವಾನಿಗೆಯ ಪತ್ರವನ್ನು ಹಾಜರು ಪಡಿಸಿ ಮರಳನ್ನು ಇಲ್ಲಿಂದ ಪಡೆಯಬಹುದಾಗಿದೆ ಎಂದರು.
ಈಗಾಗಲೇ ಜಪ್ತಿ ಮಾಡಲಾಗಿರುವ ಮರಳಿನ ಬಗ್ಗೆ ಸೂಕ್ತ ದಾಖಲಾತಿ ನೀಡಿ, ರಾಯಲ್ಟಿ (ರಾಜಧನ) ಕಟ್ಟಿದವರಿಗೆ ಮರಳು ಮರಳಿ ನೀಡಲಾಗುವುದು. ಕೇವಲ ರಾಯಲ್ಟಿ ಕಟ್ಟಿ ಮರಳು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮರಳು ಸಾಗಾಣಿಕೆ ಜಿಲ್ಲಾ ಸಂಘದವರು ತಾವು ಸಂಗ್ರಹಿಸಿದ ಮರಳು ದಾಸ್ತಾನು ತಮಗೆ ತಾಪಸ್ ಕೊಡಬೇಕು. ಅದಕ್ಕೆ ಪ್ರತಿಯಾಗಿ ರಾಯಲ್ಟಿ ಕಟ್ಟುತ್ತೇವೆ ಎಂದು ಜಿಲ್ಲಾಡಳಿತವನ್ನುದ್ದೇಶಿಸಿ ಮನವಿ ಮಾಡಿದ್ದರು. ಆದರೆ, ಜಿಲ್ಲಾಧಿಕಾರಿಗಳು ದಾಖಲಾತಿ ಪರಿಶೀಲನೆ ಕಡ್ಡಾಯ ಎಂದು ಮಹತ್ವದ ಹೇಳಿಕೆ ನೀಡಿದಂತಾಗಿದೆ.
ಜನರ ಸಹಕಾರ ಅಗತ್ಯ: ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಈಗಾಗಲೇ ಜಿಲ್ಲಾಡಳಿತ ರಾತ್ರಿ ಮರಳು ಸಾಗಣಿಕೆ ನಿಷೇಧ ಮಾಡಿದೆ. ಅಕ್ರಮ ಮರಳು ಸಾಗಾಣಿಕೆ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲ ಕಡೆ ಜಿಲ್ಲಾಡಳಿತ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ನಿಗಾವಹಿಸಲು ಸಾಧ್ಯವಿಲ್ಲ. ಹೀಗಾಗಿ ಸಾರ್ವಜನಿಕರು ಎಲ್ಲಾದರೂ ಅಕ್ರಮ ಮರಳು ಸಾಗಾಣಿಕೆ ಕಂಡು ಬಂದರೆ ತಕ್ಷಣ ತಮಗೆ ದೂರು ನೀಡಿದರೆ ಜಿಲ್ಲಾಡಳಿತ ದಾಳಿ ನಡೆಸಿ ಕ್ರಮ ಕೈಗೊಳ್ಳಲಿದೆ. ಇದಕ್ಕೆ ಜನರ ಸಹಕಾರ ಅಗತ್ಯ ಎಂದರು.
ಕೃತಕ ಅಭಾವ ಸೃಷ್ಟಿ: ಜಿಲ್ಲೆಯಲ್ಲಿ ಮನೆ ಕಟ್ಟಲು ಬೇಕಾಗುವ ಅಗತ್ಯ ಮರಳು ಲಭ್ಯವಿದೆ. ಆದರೆ, ಲಾರಿ ಮಾಲೀಕರು ಕೃತಕ ಅಭಾವ ಸೃಷ್ಟಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಟ್ರಿಪ್ಗೆ ರು. 9 ಸಾವಿರಕ್ಕೆ ಮಾರಾಟ ಮಾಡಬೇಕೆಂಬ ನಿಯಮ ಇದೆ. ಲಾರಿ ಮಾಲೀಕರು 25ರಿಂದ 30 ಸಾವಿರಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದರು.
ಮನೆ ಕಟ್ಟುವ ಮಾಲೀಕರು ಸಹ ಅದಕ್ಕೆ ಸಹಕರಿಸಿ ಮರಳು ಖರೀದಿಸುತ್ತಿದ್ದಾರೆ. ಸಾರ್ವಜನಿಕರು ದುಬಾರಿ ಬೆಲೆ ಕುರಿತು ಆಕ್ಷೇಪಿಸಿ ಜಿಲ್ಲಾಡಳಿತಕ್ಕೆ ದೂರು ನೀಡಿದರೆ ಆಗಲೇ ಕ್ರಮ ಕೈಗೊಳ್ಳಬಹುದಾಗಿತ್ತು. ಈಗಲಾದರೂ, ಜನತೆ ಎಚ್ಚೆತ್ತು ದುಬಾರಿ ಬೆಲೆಗೆ ಮರಳು ಖರೀಸದೆ ಸರ್ಕಾರಿ ಬೆಲೆಗೆ ಖರೀದಿಸಬೇಕು ಎಂದು ಸಲಹೆ ನೀಡಿದರು.
ಪರಿಶೀಲಿಸಿ ಸೂಕ್ತ ಕ್ರಮ: ಜಪ್ತಿ ಮಾಡಿರುವ ಮರಳನ್ನು ಅಕ್ರಮವಾಗಿ ಕದ್ದು ಮುಚ್ಚಿ ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ಲಾರಿ ಮಾಲೀಕರು ತಹಸೀಲ್ದಾರ್ ಮೇಲೆ ಹಲ್ಲೆ ನಡೆಸಿದ ಬಗ್ಗೆ ಮತ್ತು ತಹಸೀಲ್ದಾರ್ ಅಕ್ರಮ ಮರಳು ಸಾಗಿಸುತ್ತಿರುವ ಬಗ್ಗೆ ಸಮಗ್ರ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.