ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಲಾಡ್ ತಂಡ ಕಂಡು ಸಂತೋಷ್ ಆಯ್ತು

Mainashree
Updated On : 4 Jul 2013, 11:10 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಜು.3
ಜಲಪ್ರಳಯಕ್ಕೆ ತುತ್ತಾಗಿರೋ ನೆಲದಲ್ಲಿ(ಬದರೀನಾಥ) ಸೆರೆಸಿಕ್ಕವರು ನಾವು ಅನ್ನೋದು ಟೀವಿ ನೋಡಿದಾಗ್ಲೇ ಗೊತ್ತಾಗಿದ್ದು... ಎಲ್ರೂ ಭಯಭೀತರಾದ್ವಿ, ಹಣವಿದ್ದವರು ಖಾಸಗಿ ಹೆಲಿಕಾಪ್ಟರ್ ಹತ್ತೋಣ ಅಂತ ಹೋದ್ರೂ ಪ್ರಯೋಜನ ಆಗ್ಲಿಲ್ಲ, ಇಲ್ಲಿಂದ ಸುಲಭದಲ್ಲಿ ಹೋಗಲಾಗದು ಅನ್ನೋ ಕಟುವಾಸ್ತವ ಗೊತ್ತಾಯ್ತು.
ಮಹಾಮಳೆ ಬಳಿಕ ರುದ್ರಭೂಮಿಯಂತಾಗಿದ್ದ ನೆಲದಾಗ ನಮ್ಮ ರಾಜ್ಯದ ಸಚಿವ ಸಂತೋಷ್ ಲಾಡ್ ತಂಡ ಕಂಡಾಗ, ಧೈರ್ಯದ ಮಾತುಗಳನ್ನ ಕೇಳಿದಾಗ ನಮ್ಮ ಮಕ್ಕಳು, ಬಂಧುಗಳನ್ನೇ ಕಂಡಷ್ಟು ಖುಷಿಯಾಯ್ತು, ಊರಿಗೆ ಹೋಗ್ತೀವಿ ಅನ್ನೋ ಧೈರ್ಯಾನು ಬಂತ್ರಿ...
'ರುದ್ರ'ಪ್ರಳಯಕ್ಕೆ ತುತ್ತಾಗಿ ಸ್ಮಶಾನದಂತಾಗಿರುವ ಉತ್ತರಾಖಂಡ ಬದರಿ, ಕೇದಾರ್‌ಗೆ ಹೋಗಿದ್ದ ಗುಲ್ಬರ್ಗದ ಯಾತ್ರಿಗಳು 2 ವಾರಕಾಲ ಜಲಪ್ರಳಯಕ್ಕೆ ತುತ್ತಾದ ಪ್ರದೇಶದಲ್ಲಿ ಕೈಯಲ್ಲಿ ಜೀವ ಹಿಡಿದುಕೊಂಡೇ ಇದ್ದವರು.
ಸಂತೋಷ್ ತಂಡಕ್ಕೆ ಶ್ಲಾಘನೆ: ಇಲ್ಲಿನ ನ್ಯೂ ರಾಘವೇಂದ್ರ ಕಾಲೋನಿಯ ನಿವಾಸಿಗಳಾದ ದತ್ತಾತ್ರೇಯ ಕುಲಕರ್ಣಿ, ಗೀತಾ ಕುಲಕರ್ಣಿ, ಶಶಿಕಾಂತ ಅಕ್ಷಂತಿ, ಶಾಂತಾಬಾಯಿ ಅಕ್ಷಂತಿ, ಗೀತಾ ಭಕ್ಷಿ, ಅನಂತರಾವ ಭಕ್ಷಿ ಎಲ್ಲರೂ ಬುಧವಾರ ಬೆಳಗ್ಗೆ ಬಸವ ಎಕ್ಸ್‌ಪ್ರೆಸ್ ರೈಲಿನ ಮೂಲಕ ಸುರಕ್ಷಿತವಾಗಿ ಗುಲ್ಬರ್ಗಕ್ಕೆ ವಾಪಸ್ಸಾಗಿ ಆತಂಕದಲ್ಲಿ ಮುಳುಗಿದ್ದ ಕುಟುಂಬ ಸದಸ್ಯರಲ್ಲಿ ಸಂತಸ ಮೂಡಿಸಿದ್ದಾರೆ.
ತಾವೆಲ್ಲರೂ ಉತ್ತರಾಖಂಡ ಜಲಪ್ರಳಯದಲ್ಲಿ ಸೆರೆ ಸಿಕ್ಕು, ಅನ್ನ, ಆಹಾರಕ್ಕಾಗಿ ಪರಿತಪಿಸುತ್ತಿದ್ದಾಗ ಅಲ್ಲಿಗೆ ಧಾವಿಸಿ ಬಂದಂತಹ ರಾಜ್ಯದ ವಾರ್ತಾ ಸಚಿವ ಸಂತೋಷ್ ಲಾಡ್, ಅಧಿಕಾರಿಗಳಾದ ಪಂಕಜ್‌ಕುಮಾರ್ ಪಾಂಡೆ, ನವೀನ್‌ರಾಜ್ ಸಿಂಗ್, ಹೇಮಂತ ನಿಂಬಾಳ್ಕರ್, ಕರಿಗೌಡ ಮೊದಲಾದವರೆಲ್ಲರೂ ತಾವು ತಂಗಿದ್ದ ಧರ್ಮಛತ್ರಗಳಿಗೆ ಬಂದು ಧೈರ್ಯದ ಮಾತುಗಳನ್ನು ಹೇಳಿ ಸುರಕ್ಷಿತವಾಗಿ ಊರು ಸೇರುವಂತೆ ಮಾಡಿದ್ದಾರೆ ಎಂದು ರಾಜ್ಯದ ಪರಿಹಾರ ತಂಡದ ಕೆಲಸ ಕಾರ್ಯಗಳನ್ನು ಮುಕ್ತವಾಗಿ ಶ್ಲಾಘಿಸಿದರು.
ಪ್ರಕೃತಿ ಮುಂದೆ ಎಲ್ಲವೂ ತೃಣ ಸಮಾನ: 'ಪ್ರಕೃತಿ ಮುಂದೆ ಮಾನವ ಸೇರಿದಂತೆ ಎಲ್ಲವೂ ತೃಣ ಸಮಾನ ಅನ್ನೋದು ಬದರಿನಾಥ, ಕೇದಾರನಾಥ ಮಹಾಮಳೆ ಸಾಬೀತು ಮಾಡ್ತು ನೋಡ್ರಿ. ಅಲ್ರಿ, ಸತತ 60 ಗಂಟೆಗೂ ಹೆಚ್ಚುಕಾಲ ಸುರಿದ ಮಳ್ಯಾಗ ಸಿಕ್ಕಿ ಬಿದ್ದ ನಮ್ಗ ದಿಕ್ಕ ತೋಚದಂಗಾತು, ದೇವ್ರ ನಾಮಸ್ಮರಣೆ ಬಿಟ್ರೆ ಬೇರೇನೂ ಮಾಡುವಂಗೆ ಇರಲಿಲ್ಲ.
ಮಳಿ ಹೊಡೆತಕ್ಕ ಸ್ಥಳೀಯ ಕೆಲಸಗಾರರು ಜಾಗ ಖಾಲಿ ಮಾಡಲಾರಂಭಿಸಿದಾಗ ನಾವಂತೂ ಸಾವಿರಾರು ಕಿಲೋ ಮೀಟರ್ ದೂರದಿಂದ ಬಂದವರು, ಇಲ್ಲೇನೂ ಗೊತ್ತಿಲ್ಲದವರು, ಮುಂದೇನೋ ಎಂದು ನಿಜಕ್ಕೂ ಹೆದರಿ ಬಿಟ್ಟೇವು' ಎಂದು ಎಲ್ಲರೂ ತಾವು ಕಂಡ ಪ್ರಳಯದ ಸಾಕ್ಷಾತ್ ಅನುಭವಗಳನ್ನು 'ಕನ್ನಡಪ್ರಭ' ಜೊತೆ ಹಂಚಿಕೊಂಡರು.
ಜೀವ ಕೈಯಲ್ಲಿ ಹಿಡಿದೇ ದಿನ ದೂಡಿದ್ರು: ಅನಾವೃಷ್ಟಿಗೆ ಇನ್ನೊಂದು ಹೆಸರೇ ಗುಲ್ಬರ್ಗ. ಇಲ್ಲಿ ವರ್ಷದಲ್ಲಿ 30ರಿಂದ 45 ಮಳೆ ದಿನಗಳು. ಬಿಸಿಲೂರಿನ ಈ ಮಂದಿ ಬದರಿನಾಥದಲ್ಲಿ ಸುರಿದ 3 ದಿನದ ಮಹಾಮಳೆಯಲ್ಲೇ ಗುಲ್ಬರ್ಗದಲ್ಲಿ ದಶಕಕ್ಕಾಗುವಷ್ಟು ಮಳೆ ಸುರಿದಂತಹ ಅನುಭವ ಕಂಡವರು.
ದೇವರ ದರುಶನ, ಪಿತೃ ಋಣ ತೀರಿಸಲು ಹೋಗಿದ್ದ ಇವರೆಲ್ಲರೂ ಮಹಾಮಳೆಯಲ್ಲಿ ಅಟಕಾಯಿಸಿಕೊಂಡಾಗ ಪರೇಶಾನ್. ಮರಳಿ ಮನೆಗೆ ಹೋಗುವುದೇ ಖಾತ್ರಿ ಇಲ್ಲದ ದುಸ್ಥಿತಿ. ಇವರನ್ನು ಆ ಕ್ಷಣ ಜೀವಭಯ ಕಾಡಿದೆ. ಅಷ್ಟೆ ಅಲ್ಲ, ಉತ್ತರಾಖಂಡ ಸರ್ಕಾರ ಯಾವುದೇ ನೆರವು ನೀಡುತ್ತಿಲ್ಲವೆಂಬ ಕೋಪ- ತಾಪವೂ ಉಕ್ಕಿ ಬಂದಿದೆ. ಆದರೇನು ಮಾಡುವುದು, ತಮ್ಮನ್ನು ಕಾಡುತ್ತಿರುವ ಹಲವು ಭಾವನೆಗಳನ್ನೆಲ್ಲ ಒಳಗೆ ಒತ್ತಿಟ್ಟುಕೊಳ್ಳುವ ಅನಿವಾರ್ಯತೆ.
ಚುರುಮುರಿ ತಿಂದು ದಿನ ಕಳೆದ್ವಿ: 'ಚುರುಮುರಿ ತಿಂದು ದೂಡಿದ ಜಲಪ್ರಳಯದ 3 ದಿನ ಮರೆಯೋದಿಲ್ಲ, ಪೇಜಾವರ ಮಠ, ಜೋಷಿಮಠಗಳ ನೆರವು ಹೆಚ್ಚಾಯ್ತು. ಸ್ಥಳೀಯರಂತೂ ತುಂಬ ಸಹಾಯ ಮಾಡಿದ್ರು. ಇಲ್ಲಿನ ಪಡಿತರ ಧಾನ್ಯಕ್ಕಾಗಿ ಬಡವರು ಪಡಬಾರದ ಪಾಡುತ್ತಾರಲ್ಲ, ಹಾಗೇ ನಾವು ಅಲ್ಲಿ ಹೆಲಿಕಾಪ್ಟರ್ ಟೋಕನ್‌ಗಾಗಿ ಪಟ್ಟ ಪಾಡು ಬದರಿನಾಥನೇ ಬಲ್ಲ. ನಾವಂತೂ ಮರುಜನ್ಮ ಪಡೆದೆವು. ದೇವರು ದೊಡ್ಡವ, ಹಿರಿಯರ ಆಶೀರ್ವಾದ ಇತ್ತು, ಬದುಕಿ ಬಂದೇವು' ಎನ್ನುತ್ತಾರೆ ಗೀತಾ ಕುಲಕರ್ಣಿ.
ಬದರಿನಾಥಗೆ ಕಾಲಿಟ್ಟ ದಿನವಾದ ಜೂನ್ 15ರ ಸಂಜೆ 4 ಗಂಟೆಗೆ ಶುರುವಾದ ಮಳೆ ಸತತ 3 ದಿನ ಮೂರು ರಾತ್ರಿ ಸುರಿದಾಗ ಇವರೆಲ್ಲರೂ ಹೌಹಾರಿದ್ದಾರೆ. ಆದಾಗ್ಯೂ ಎಲ್ಲರೂ ಪಿತೃಕಾರ್ಯ ಪೂರೈಸಿದ್ದಾರೆ. ಮಳೆಯಲ್ಲೇ ನಾರಾಯಣನ ದರುಶನ ಪಡೆದಿದ್ದಾರೆ.
ಜೇವರ್ಗಿ ಯಾತ್ರಿಗಳು ತವರಿಗೆ: ಬದರೀನಾಥದಲ್ಲಿ ಸಿಲುಕಿ ಹಾಕಿಕೊಂಡಿದ್ದ ಜೇವರ್ಗಿಯ ರಾಸಣಗಿ ಬಲಭೀಮಸೇನ ದೇವರ ಅರ್ಚಕ ಶೇಷಾಚಾರ್ಯ ಜೋಷಿ, ಅವರ ಪತ್ನಿ ಪದ್ಮಾವತಿಬಾಯಿ, ಜೇವರ್ಗಿ ಮೂಲದ ಕಲಾವತಿಬಾಯಿ ಕುಲಕರ್ಣಿ ರಾಜ್ಯ ತಂಡದ ನೆರವಿನಿಂದಾಗಿ ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ. ಇಲ್ಲಿನ ಕೇದಾರನಾಥ ಜಾಜಿ ಮತ್ತವರ ಪತ್ನಿ ಇವರೂ ಕೇದಾರನಾಥದಲ್ಲಿ ಸಿಲುಕಿದ್ದರು. ಇವರಂತೂ ವಾರದ ಹಿಂದೆಯೇ ಸುರಕ್ಷಿತವಾಗಿ ಗುಲ್ಬರ್ಗಕ್ಕೆ ಮರಳಿದ್ದನ್ನು ಸ್ಮರಿಸಬಹುದು. ಗುಲ್ಬರ್ಗದ ಎಲ್ಲ ಆಸ್ತಿಕ ಭಕ್ತ ಜನತೆ ಸುರಕ್ಷಿತವಾಗಿ ತಮ್ಮ ಮನೆ ಸೇರಿದಂತಾಗಿದೆ.

 ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement