ವಿದ್ಯಾರ್ಥಿಗಳು ಅಭಿವೃದ್ಧಿಗಾಗಿ ಶ್ರಮಿಸಲಿ: ವೈಜನಾಥ
ಗುಲ್ಬರ್ಗ: ನಗರದ ಇನಾಂದಾರ ಸಮಾಜ ಕಾರ್ಯ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಹೈ-ಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಕಾರ್ಯ ವಿದ್ಯಾರ್ಥಿಗಳು ಹಿಂದುಳಿದ ಭಾಗದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಉತ್ತಮ ನಾಗರಿಕತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.
ಕರ್ನಾಟಕ ಕೆಂದ್ರೀಯ ವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಚನ್ನವೀರ ಆರ್.ಎಂ. ಮಾತನಾಡಿ, ಸಮಾಜ ಕಾರ್ಯದ ವಿದ್ಯಾರ್ಥಿಗಳು ನೈಪುಣ್ಯತೆ ಮತ್ತು ಅನೇಕ ಭಾಷೆಗಳ ತಿಳಿದುಕೊಂಡು ಇಡೀ ವಿಶ್ವ ಜನಾಂಗಕ್ಕೆ ತಮ್ಮ ಅಮೂಲ್ಯ ಸೇವೆ ಸಲ್ಲಿಸಬೇಕು. ನಿಸ್ವಾರ್ಥ ಮತ್ತು ಆತ್ಮಬಲ ಮುಂತಾದವುಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಡಾ.ಕ್ಯೂ.ಎಂ.ಇನಾಂದಾರ್ ಮಾತನಾಡಿ, ಸಮಾಜ ಕಾರ್ಯದ ವಿದ್ಯಾರ್ಥಿಗಳು ಸ್ವಾರ್ಥಿಗಳಾಗದೆ ನಿಸ್ವಾರ್ಥ ಸೇವೆಯನ್ನು ಸಮಾಜಕ್ಕಾಗಿ ತೊಡಗಿಸಿಕೊಳ್ಳಬೇಕು ಹಾಗೂ ಈ ಭಾಗದ ಏಳಿಗೆಗಾಗಿ ಶ್ರಮಿಸಬೇಕು ಎಂದರು.
ಪ್ರಾಧ್ಯಾಪಕರಾದ ದೇಶಮುಖ, ಡಾ.ಅತೀಕ್, ಚನ್ನಬಸಪ್ಪ ಕನ್ಯಾಕುಮಾರಿ ಹಾಗೂ ಗೋಪಾಲ್ ಕುಲ್ಕರ್ಣಿ ಮತ್ತಿತರರು ಭಾಗವಹಿಸಿದ್ದರು.
ಇನಾಂದಾರ ಸಮಾಜ ಕಾರ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಸಿ. ಗುಳಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮರೆಪ್ಪ ಸ್ವಾಗತಿಸಿದರು.ಪದ್ಮಾವತಿ ನಿರೂಪಿಸಿದರು. ಲಾಲ ಅಹ್ಮದ್ ವಂದಿಸಿದರು.