ಆಣೆಕಟ್ಟೆಗೆ ಸಿಸಿ ಕ್ಯಾಮೆರಾ ಅಳವಡಿಸಲು ಟೆಂಡರ್
ಹುಣಸಗಿ: ನಾರಾಯಣಪುರ ಜಲಾಶಯ, ಡೋಣಾ ಮೇಲ್ಸೇತುವೆ, ಎಸ್ಕೇಪ್ ಗೇಟ್, ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ ಗೇಟ್ಗಳ ದುರಸ್ತಿ ಸೇರಿದಂತೆ 30 ಕೋಟಿ ವೆಚ್ಚದಲ್ಲಿ 90 ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ ಟೆಂಡರ್ ಕರೆಯಲಾಗಿದೆ ಎಂದು ಆಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ. ಪಾಟೀಲ್ ತಿಳಿಸಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಣೆಕಟ್ಟು ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ಡಾಂಬರೀಕರಣ, ಮಣ್ಣಿನ ಏರಿಗೆ ಹಸಿರು ಹುಲ್ಲಿನ ಹೊದಿಕೆ ಹಾಕುವುದು, ಸಿಸಿ ಕ್ಯಾಮೆರಾ ಅಳವಡಿಕೆ, ಡ್ಯಾಂನ ಡೈಕ್ ಅಪ್ರೋಚ್ ದುರಸ್ತಿ ಮತ್ತು ಗೇಟುಗಳ ದುರಸ್ತಿ, ಬಣ್ಣ ಮಾಡುವುದು ಸೇರಿದಂತೆ ಅನೇಕ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಪ್ರಮುಖ ಸ್ಥಳಗಳಾದ ಆಣೆಕಟ್ಟು, ಡೋಣಾ ಮೇಲ್ಸೇತುವೆ, ಮುಖ್ಯ ಕಾಲುವೆಯ ಗೇಟ್ ಹತ್ತಿರ ತಾಂತ್ರಿಕ ಮಾಹಿತಿ ಅಳವಡಿಸಲಾಗುವುದು ಎಂದು ತಿಳಿಸಿದರು.