ಎಸ್ಡಿಎಂಸಿ ರಚನೆ, ಮನೆ ಹಂಚಿಕೆಹಸ್ತಕ್ಷೇಪವಿಲ್ಲ: ಬಿ.ಆರ್. ಪಾಟೀಲ್
ಕನ್ನಡಪ್ರಭ ವಾರ್ತೆ, ಆಳಂದ, ಜು.4
ಶಾಲಾ ಎಸ್ಡಿಎಂಸಿ ರಚನೆಯಲ್ಲಿ ಹಾಗೂ ಗ್ರಾಮ ಪಂಚಾಯತಿ ಮಟ್ಟದ ಆಶ್ರಯ ಮನೆ ಹಂಚಿಕೆಯಲ್ಲಿ ಹಿಂದಿನವರಂತೆ ತಪ್ಪು ಮಾಡಿ, ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಶಾಸಕ, ಕೆಜೆಪಿ ಶಾಸಕಾಂಗ ಪಕ್ಷದ ಉಪನಾಯಕ ಬಿ.ಆರ್. ಪಾಟೀಲ್ ಹೇಳಿದರು.
ತಾಲೂಕಿನ ಶುಕ್ರವಾಡಿ ಗ್ರಾಮದಲ್ಲಿ ನಡೆದ ಗ್ರಾಮ ದರ್ಶನ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಕೈಗೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನ್ಯಾಯಪರ ಕೆಲಸಕ್ಕೆ ನಾನ್ನ ಬೆಂಬಲ: ಅಧಿಕಾರದಾಚೆಗೂ ಕಾನೂನು ಬದ್ಧ ಹಾಗೂ ನ್ಯಾಯಪರ ಕೆಲಸಕ್ಕೆ ನಾನು ಬೆಂಬಲ ನೀಡಲು ಸಿದ್ಧನಾಗಿರುವೆ. ಶಾಲೆಗಳಲ್ಲಿ ಓದುವ ಮಕ್ಕಳ ಪಾಲಕ, ಪೋಷಕರು, ಶಿಕ್ಷಣದ ಬಗ್ಗೆ ನಿಜವಾದ ಕಾಳಜಿ ಹೊಂದಿದವರಿಗೆ ಸಭೆ ನಡೆಸಿ ಅಧ್ಯಕ್ಷರ ಆಯ್ಕೆ ಮಾಡಿ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದ ಅವರು, ಗ್ರಾಪಂ ಆಶ್ರಯ ಮನೆ ಹಂಚಿಕೆಯಲ್ಲಿ ಶಾಸಕರಿಗೆ ಯಾವುದೇ ಅಧಿಕಾರವಿಲ್ಲ. ಹಿಂದಿನವರ ಅಧಿಕಾರದಲ್ಲಿ ಹಂಚಿದ ಮನೆಗಳು ಶ್ರೀಮಂತರ ಪಾಲಾಗಿ ಎಲ್ಲಿ ಮನೆ ಕಟ್ಟಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ ಎಂದರು.
ಗ್ರಾಮ ಸಭೆ ನಡೆಸಲಿ: ಮುಂದೆ ಹೀಗಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ ಶಾಸಕರು, ಮನೆ ಹಂಚಿಕೆ ಅಧಿಕಾರವು ಸರ್ಕಾರ ಗ್ರಾಪಂಗೆ ವಹಿಸಿದ ಮೇಲೆ ಪ್ರತಿ ಗ್ರಾಮದಲ್ಲಿ ಗ್ರಾಮ ಸಭೆ ನಡೆಸುವ ಮೂಲಕ ನಿಜವಾದ ಬಡವರಿಗೆ ಮನೆಗಳು ಹಂಚಿಕೆಯಾಗಬೇಕು. ಗ್ರಾಮ ಸಭೆ ನಡೆಸದೆ ಮನೆ ಹಂಚಿಕೆ ಮಾಡುವ ಅಧ್ಯಕ್ಷರ ಸದಸ್ಯತ್ವವೇ ಸರ್ಕಾರ ರದ್ದುಪಡಿಸಲಿದೆ ಎಂದು ಎಚ್ಚರಿಸಿದರು.
ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಶಾಶ್ವತ ನಿವಾರಣೆಗೆ ಮೊದಲಾದ್ಯತೆ ಸೇರಿ ರಸ್ತೆ ಪ್ರಮುಖ ಅಭಿವೃದ್ಧಿ ಕೈಗೊಂಡು ಬೇಡಿಕೆಗೆ ಸ್ಪಂದಿಸಿ ಮತದಾರರ ಋಣ ತೀರಿಸುವುದಾಗಿ ಭರವಸೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ್ ಮಾತನಾಡಿದರು. ಗ್ರಾಮದ ದತ್ತರಾಜ ಲಾಡಂತಿ ಶಾಸಕರಿಗೆ ಬೇಡಿಕೆಯ ಮನವಿ ಸಲ್ಲಿಸಿದರು. ತಾಪಂ ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ್, ತಡಕಲ್ ನಾಗಣ್ಣ ಗೌರೆ, ಮಸ್ತಾನ ಪೊಲೀಸ್ ಪಾಟೀಲ್, ಯಶ್ವಂತರಾವ ಭೂಸನೂರೆ, ರೇವಣ್ಣ ಖಜೂರಿ, ಶಾಂತಪ್ಪ ಹಾರಕೂಡೆ, ಶಿವುಪುತ್ರ ಮರಡಿ, ಜೈಭೀಮ ತರುಣ ಸಂಘದ ಅಧ್ಯಕ್ಷ ದೇವಿಂದ್ರ ಲಾಡಂತಿ, ಪ್ರಕಾಶ ಲಾಡಂತಿ, ಲಕ್ಷ್ಮಣ ಕೊಡ್ಲೆ, ಸುಭಾಷ ಮುಗಳಿ, ಕಾಶಿನಾಥ ಜಮಾದಾರ ಇತರರು ಪಾಲ್ಗೊಂಡಿದ್ದರು.
ಶ್ರೀಮಂತ ಕಾರಬಾರಿ ಅಧ್ಯಕ್ಷತೆ ವಹಿಸಿದ್ದರು. ಜ್ಞಾನೇಶ್ವರ ಜಮಾದಾರ ನಿರೂಪಿಸಿದರು.
ತಡಕಲ್ ಮತ್ತು ಬಾಲಖೇಡದಲ್ಲಿ ಶಾಸಕ ಬಿ.ಆರ್. ಪಾಟೀಲ್ರ ಗ್ರಾಮ ದರ್ಶನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಗ್ರಾಮದ ಬೇಡಿಕೆ ಈಡೇರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ತಡಕಲ್ದಲ್ಲಿ ಗುರಣ್ಣ ನಾಮಣೆ ಅಧ್ಯಕ್ಷತೆ ವಹಿಸಿದ್ದರು. ನಾಗಣ್ಣಾ ಗೌರೆ, ಕಲ್ಯಾಣಿ ತುಕಾಣಿ ವಿವಿಧ ಬೇಡಿಕೆ ಮನವಿ ಸಲ್ಲಿಸಿದರು. ದತ್ತು ಮಾಳಿಗೆ ಸೇರಿ ಇತರರು ಉಪಸ್ಥಿತರಿದ್ದರು.
ಬಾಲಖೇಡ ಗ್ರಾಮದಲ್ಲಿ ಬಾಬುರಾವ ದಳಪತಿ ಅಧ್ಯಕ್ಷತೆ ವಹಿಸಿದ್ದರು. ಜಗನಾಥ ಬಿರಾದಾರ ಅವರು ರಸ್ತೆ, ನೀರಿನ ಸಮಸ್ಯೆ ಮತ್ತಿತರ ಬೇಡಿಕೆ ಮನವಿ ಸಲ್ಲಿಸಿದರು.
ವಿಠ್ಠಲರಾವ ಪಾಟೀಲ್, ಚಂದ್ರಕಾಂತ ಘೋಡಕೆ ಮಾತನಾಡಿದರು. ಜಾಕೀರ್ ಅನ್ಸಾರಿ, ಶಿವರಾಜ ಪೂಜಾರಿ, ಒಳವಂಡವಾಡಿ ಸಿದ್ದರಾಮ ಪಾಟೀಲ್, ಶಿವುಪುತ್ರಪ್ಪ ಚಿಂಚೋಳಿ ಅನೇಕರು ಪಾಲ್ಗೊಂಡಿದ್ದರು.