ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತಂತ್ರಜ್ಞಾನ; ಅಪರಾಧಿಗಳ ಪತ್ತೆ ಸುಲಭ

Lingaraj Badiger
Updated On : 5 Jul 2013, 11:44 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಜು.4
ಅಪರಾಧ ಪ್ರಕರಣಗಳ ಬೆನ್ನು ಹತ್ತುವಾಗ ಮುಂದುವರಿದ ತಂತ್ರಜ್ಞಾನದ ನೆರವು ಅಗತ್ಯ. ಇದರಿಂದ ಸುಲಭವಾಗಿ ಅಪರಾಧಿಗಳನ್ನು ಪತ್ತೆ ಹಚ್ಚಬಹುದು. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಪ್ರಭಾರಿ ಎಸ್ಪಿ ಪಿ.ಮಹಾಂತೇಶ ಸಲಹೆ ನೀಡಿದರು.
  ಇಲ್ಲಿಯ ಡಿವೈಎಸ್ಪಿ ಕಚೇರಿಯಲ್ಲಿ ಗುರುವಾರ ಯಾದಗಿರಿ ಉಪವಿಭಾಗ ಗಡಿ ಅಪರಾಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಪರಾಧ ಪ್ರಕರಣಗಳನ್ನು ಬೆನ್ನತ್ತುವ ಅಧಿಕಾರಿಗಳು ಸಕಾರಾತ್ಮಕ ಗುಣಗಳೊಂದಿಗೆ ಕಾರ್ಯಾಚರಣೆಗೆ ಇಳಿದಾಗ ಮಾತ್ರ ಅಪರಾಧಿಗಳ ಬೇಟೆ ಸಾಧ್ಯವಾಗುತ್ತದೆ. ಬೈಕ್ ಕಳ್ಳತನ ಹಾಗೂ ಬ್ಯಾಂಕ್‌ಗೆ ಹಣ ಕಟ್ಟಲು ಬರುವ ಇಲ್ಲವೇ ಹಣ ಡ್ರಾ ಮಾಡಿಕೊಂಡು ಹೊರಬರುವ ವ್ಯಕ್ತಿಗಳ ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಪೊಲೀಸರು ಆಯಕಟ್ಟಿನ ಜಾಗಗಳಲ್ಲಿ ಜಾಗ್ರತೆ ವಹಿಸಬೇಕು ಎಂದರು.
ಆರೋಪಿಗಳ ಭಾವಚಿತ್ರ ನೀಡಿ: ರೇಲ್ವೆ ನಿಲ್ದಾಣಗಳಲ್ಲಿ ನಡೆಯುತ್ತಿರುವ ಅಥವಾ ಅಪರಾಧ ಮಾಡಿದ ನಂತರ ರೈಲಿನ ಮೂಲಕ ಪರಾರಿಯಾಗುವ ಆರೋಪಿಗಳ ಕುರಿತು ಪತ್ತೆ ಹಚ್ಚಲು ಸಹಕರಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಅವರು, ಆರೋಪಿಗಳ ಭಾವಚಿತ್ರಗಳನ್ನು ಸ್ಥಳೀಯ ಪೊಲೀಸರಿಗೆ ನೀಡಿದರೆ ಅನೇಕ ಅಪರಾಧ ಪ್ರಕರಣಗಳನ್ನು ಭೇದಿಸಬಹುದು ಎಂದು ಹೇಳಿದರು.
  ಬೈಕ್ ಕಳ್ಳತನ ಮಾಡಿ ಆಂಧ್ರ ನೋಂದಣಿ ನಂಬರ್ ಬರೆಸಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆಂಧ್ರ ಪೊಲೀಸರು ಈ ನಿಟ್ಟಿನಲ್ಲಿ ಜಿಲ್ಲೆಯ ಅಧಿಕಾರಿಗಳಿಗೆ ಸಹಕಾರ ನೀಡಬೇಕೆಂದು ತಿಳಿಸಿದರು.
ಆರೋಪಿಗಳ ಮಾಹಿತಿಗೆ ಸೂಚನೆ: ಅಬಕಾರಿ ಹಾಗೂ ಲಾಟರಿ ನಿಷೇಧ ದಳದ ಅಧಿಕಾರಿಗಳಿಗೆ ಕಳ್ಳತನ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳುವ ಅಥವಾ ಬಂಧಿಸುವ ಆರೋಪಿಗಳ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು.
 ಜಿಲ್ಲೆಯಲ್ಲಿ ನಡೆದಿರುವ ಅಪರಾಧ ಪ್ರಕರಣ ಕುರಿತು ತೀವ್ರ ತನಿಖೆ ನಡೆಸಬೇಕಾದರೆ ಇಲಾಖೆಯ ಎಲ್ಲ ಅಧಿಕಾರಿಗಳ ಸಹಾಯ ಮತ್ತು ಸಹಕಾರ ಜತೆಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಪೊಲೀಸ್ ಅಧಿಕಾರಿಗಳು ಯಾವುದೇ ಅಪರಾಧ ಪ್ರಕರಣ ಕುರಿತು ದೂರು ದಾಖಲಿಸಿಕೊಳ್ಳಲು ಹಿಂಜರಿಕೆ ಬೇಡ ಎಂದು ಸಲಹೆ ನೀಡಿದರು.
ಭದ್ರತೆಗಾಗಿ ಪೊಲೀಸರ ಬಳಕೆ: ಪೊಲೀಸರನ್ನು ಅವರ ಮೂಲ ಕೆಲಸದಿಂದ ವಿಮುಕ್ತಿ ಮಾಡಿ ಬೇರೆ ಕೆಲಸಗಳಿಗೆ ತೊಡಗಿಸಿಕೊಳ್ಳುತ್ತಿರುವುದರಿಂದಾಗಿ ಅಪರಾಧ ಪ್ರಕರಣಗಳ ತನಿಖೆಯಲ್ಲಿ ವಿಳಂಬವಾಗುತ್ತಿದೆ ಎಂದ ಮಹಾಂತೇಶ್, ಅಕ್ರಮ ಮರಳು, ಬೀಡಿ- ಸಿಗರೇಟು ಸೇವನೆ ಮಾಡಿದವರಿಗೆ ದಂಡ ವಸೂಲಿ, ಗುಟ್ಕಾ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಎಲ್ಲ ವಿಧಾನಗಳಲ್ಲಿ ಪೊಲೀಸ್ ಬಲವನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಯಾವುದರಲ್ಲೂ ಪೊಲೀಸರನ್ನು ಸ್ವತಂತ್ರವಾಗಿ ಬಿಡದೇ ಕೇವಲ ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.
   ಇಂಡಿ ಡಿವೈಎಸ್ಪಿ ಬಿ.ಎನ್. ಅಂಬಿಗೇರ್, ಬಸವನಬಾಗೇವಾಡಿ ಡಿವೈಎಸ್ಪಿ ಎಂ.ವೈ ಪಾಲ್ಗುಡಿ, ದೇವದುರ್ಗ ಸಿಪಿಐ ಡಾ. ಗಿರೀಶ ಭೋಜಣ್ಣವರ್, ನಾರಾಯಣಪೇಠ ಸಿಪಿಐ ಎನ್.ನಿಂಗಯ್ಯ, ವಾಡಿ ಸಿಪಿಐ ಶಿವನಗೌಡ, ಹುಣಸಗಿ ಸಿಪಿಐ ಸತ್ಯನಾರಾಯಣರಾವ್, ಡಿಸಿಐಬಿ ಇನ್ಸ್‌ಪಕ್ಟರ್ ಏಗನಗೌಡರ್, ಶಹಾಪುರ ಸಿಪಿಐ ನ್ಯಾಮಗೌಡ, ಸಿಪಿಯ ಲಿಂಗಾನಾಯಕ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement