ಪಿಡಿಎ ಎಂಜಿನಿಯರಿಂಗ್ ಕಾಲೇಜು; ನಾಳೆ ಪದವಿ ಪ್ರದಾನ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜು.4
ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ ಶೈಕ್ಷಣಿಕ ಸ್ವಾಯತ್ತತೆ ಪಡೆದಿರುವ ಇಲ್ಲಿನ ಹೈ.ಕ. ಶಿಕ್ಷಣ ಸಂಸ್ಥೆಯ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜು ತನ್ನ 2ನೇ ಪದವಿ ಪ್ರದಾನ ಸಮಾರಂಭ ಜು.6 ರ ಶನಿವಾರ ಆಯೋಜಿಸಿದೆ.
ತನ್ನ ಶೈಕ್ಷಣಿಕ ಪಠ್ಯಕ್ರಮ, ಶೈಕ್ಷಣಿಕ ವೇಳಾಪಟ್ಟಿ, ಪರೀಕ್ಷೆಯ ಸ್ವತಂತ್ರ ನಿರ್ವಹಣೆಯಂತಹ ಕ್ರಮಗಳಿಂದ ಹೆಸರು ಮಾಡುತ್ತಿರುವ ಕಾಲೇಜು 2012ರಲ್ಲಿ ಪದವಿ ಪಡೆದ 2ತಂಡದ ವಿದ್ಯಾರ್ಥಿಗಳಿಗೆ ಏರ್ಪಡಿಸಿರುವ ಪದವಿ ಪ್ರದಾನ ಸಮಾರಂಭಕ್ಕೆ ಮುಖ್ಯ ಭಾಷಣಕಾರರಾಗಿ ಅಭಾ ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಎಸ್.ಎಸ್. ಮಂಥಾ, ಅತಿಥಿಗಳಾಗಿ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿರುವ ಎಚ್.ಯು. ತಳವಾರ್, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಡಾ. ಕೆ.ಇ. ಪ್ರಕಾಶ ಭಾಗವಹಿಸುತ್ತಿದ್ದಾರೆ.
5ಚಿನ್ನದ ಪದಕ: ಸುದ್ದಿಗೋಷ್ಠಿಯಲ್ಲಿ ಈ ಸಂಗತಿ ತಿಳಿಸಿರುವ ಹೈಕಶಿ ಸಂಸ್ಥೆ ಉಪಾಧ್ಯಕ್ಷ ಬಾಬುರಾವ ಮಂಗಾಣೆ, ಆಡಲಿತ ಮಂಡಲಿ ಸದಸ್ಯರಾದ ಡಾ. ಸಂಪತ್ ಕುಮಾರ ಲೋಯಾ, ಸುಭಾಸ ವಿಜಾಪುರ ಅವರು ಮಾಹಿತಿ ತಂತ್ರಜ್ಞಾನ ವಿಜ್ಞಾನ ವಿಭಾಗದ ನಿದಾ ಸುಮಯ್ಯಾ ಎಂಬುವವರು ಅತಿ ಹೆಚ್ಚು 5ಚಿನ್ನದ ಪದಕ ಪಡೆದು ಪ್ರತಿಭೆ ಮೆರೆದಿದ್ದಾರೆ ಎಂದರು. ಸಿವಿಲ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್ ಸೇರಿದಂತೆ 11 ವಿವಿಧ ವಿಭಾಗಗಳಲ್ಲಿ 660 ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಪದವಿ ಪಡೆಯಲು ಅರ್ಹರಾಗಿದ್ದಾರೆ. ಇದಲ್ಲದೆ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ಶೇ.95 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಾಲೇಜು ಗುಣಮಟ್ಟದ ತಾಂತ್ರಿಕ ಶಿಕ್ಷಣ ಕೊಡುವಲ್ಲಿ ಹೆಚ್ಚು ಲಕ್ಷ ಕೊಡುತ್ತಿದೆ. ಕೇಂದ್ರ ಸರ್ಕಾರ ಪ್ರಾಯೋಜಿತ ಟೆಕ್ವಿಪ್ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೂ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಬೋಧಕ ಸಿಬ್ಬಂದಿ ವೈಯಕ್ತಿಕವಾಗಿ ವಿದ್ಯಾರ್ಥಿಗಳ ನಡಾವಳಿ ಮೇಲೆ ನಿಗಾ ಇಡುವುದರ ಜೊತೆಗೆ ಅಧ್ಯಯನದಲ್ಲಿ ಅವರು ಸ್ವಂತಿಕೆಯೊಂದಿಗೆ ಮುಂದುವರಿಯುವಂತೆಯೂ ಪ್ರೋತ್ಸಾಹಿಸುವಂತಹ ವಾತಾವರಣ ನಿರ್ಮಿಸಲಾಗಿದೆ ಎಂದು ಮಂಗಾಣೆ, ಡಾ. ಲೋಯಾ ಹೇಳಿದರು.
ಪದಕ ವಿಜೇತರಿವರು...
ನಿದಾ ಸುಮಯ್ಯಾ- ಮಾಹಿತಿ ವಿಜ್ಞಾನ, ಶ್ರುತಿ- ಕಂಪ್ಯೂಟರ್ ವಿಜ್ಞಾನ, ಶ್ರುತಿ ಎಂ- ಎಲೆಕ್ಟ್ರಿಕಲ್, ಅಪೂರ್ವಾ- ಇಂಡಸ್ಟ್ರಿಯಲ್ ಪ್ರೊಡಕ್ಷನ್, ಪ್ರೀತಿ ಓಟಿ- ಎಲೆಕ್ಟ್ರಾನಿಕ್ಸ್, ಗಿರೀಶ ಕೆ- ಮೆಕ್ಯಾನಿಕಲ್, ನಯನ ಆರ್- ಸಿವಿಲ್, ವಿಜೇತ ಎಸ್‌ಎಂ- ಇನ್ಸ್‌ಟ್ರುಮೆಂಟೇಶನ್ ಟೆಕ್ನಾಲಜಿ, ಪ್ರಶಾಂತ ಎಸ್ ಎಂ - ಅಟೋಮೋಬೈಲ್, ವೈಭವ ವಿಎಂ - ಆರ್ಕಿಟೆಕ್ಚರ್ , ಅಮರಸಿಂಗ್- ಸಿರ್ಯಾಮಿಕ್, ತೃಪ್ತಿ- ಮಾಹಿತಿ ವಿಜ್ಞಾನ, ಅಶ್ವಿನಿ ಡಿ- ಕಂಪ್ಯೂಟರ್ ವಿಜ್ಞಾನ, ಪಿ ಶರಣಪ್ಪ ಎಂ- ಥರ್ಮಲ್ ಪವರ್, ದಿಗಂಬರ್- ಪ್ರೊಡಕ್ಷನ್ ಎಂಜಿನಿಯರಿಂಗ್, ತೃಪ್ತಿ ಎನ್.ಪಿ.- ಎನ್ವಿರಾನ್‌ಮೆಂಟಲ್, ಮುಕ್ತಾರ್ ಅಹ್ಮದ್- ಸ್ಟ್ರಕ್ಚರಲ್, ಶಿಯಾಸ್ತಾ ಪರ್ವಿನ್- ಬಯೋ ಮೆಡಿಕಲ್ ಇಲೆಕ್ಟ್ರಾನಿಕ್ಸ್, ಪ್ರತಿಭಾ ಕೆ- ಕಮ್ಯುನಿಕೆಷನ್ ಸಿಸ್ಟಂ, ಸಪ್ನಾ ಎಲ್- ಪವರ್ ಇಲೆಕ್ಟ್ರಾನಿಕ್ಸ್