ವಿವಿ ಲೆಟರ್ ಹೆಡ್!
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.4
ಬೇಕಾಬಿಟ್ಟಿ 'ಗೌಡಾ'(ಗೌರವ ಡಾಕ್ಟರೇಟ್ ಪದವಿ) ಕೊಡಲಾಗುತ್ತಿದೆ ಎಂದು ಈಗಾಗಲೇ ಪ್ರಜ್ಞಾವಂತರಿಂದ ಟೀಕೆಗೆ ಗುರಿಯಾಗಿರುವ, ಕಟ್ಟಳೆಗಳನ್ನು ಗಾಳಿಗೆ ತೂರಿ ಪಿಎಚ್‌ಡಿ ಪ್ರವೇಶಗಳಿಗೆ ಹಸಿರು ನಿಶಾನೆ ನೀಡಲಾಗುತ್ತಿದೆ ಎಂದು ಶೈಕ್ಷಣಿಕ ವಲಯದಲ್ಲಿ ತೀವ್ರ ನಿಂದನೆಗೆ ಗುರಿಯಾಗುತ್ತಿರುವ ಇಲ್ಲಿನ ಜ್ಞಾನಗಂಗೆಯಲ್ಲೀಗ ಮತ್ತೊಂದು ವಿವಾದ ಸೃಷ್ಟಿಯಾಗಿದೆ.
ವಿವಿ ಕುಲಪತಿ ತಮ್ಮ 60ನೇ ಹುಟ್ಟುಹಬ್ಬ ಆಮಂತ್ರಣಕ್ಕೆ ವಿವಿಯ ಸಂಕೇತವಿರುವ, ಅತ್ಯಂತ ಮಹತ್ವದ ಲೆಟರ್ ಹೆಡ್ ಬಳಸಿದ್ದಾರೆ. ಅಷ್ಟೇ ಅಲ್ಲ, ಕುಲಸಚಿವರ ಕಚೇರಿ ವ್ಯವಸ್ಥೆಯನ್ನೂ ಯಾವ ಮುಲಾಜಿಲ್ಲದಂತೆ ಬಳಸಿಕೊಂಡು ಹೊಸ ವಿವಾದ ಮೊಳಕೆಯೊಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.
ಔತಣಕೂಟ ಆಮಂತ್ರಣ ಸುದ್ದಿ ಹೊತ್ತ ಲೆಟರ್ ಹೆಡ್‌ನಲ್ಲಿ ಸರ್ಕಾರದ ಸಂಪರ್ಕಕ್ಕೆ ಬಳಸುವ ಎಲ್ಲ ಪದಪುಂಜಗಳಿವೆ. ಸರ್ಕಾರಿ ಕಡತ ಸಂಖ್ಯೆಯೂ ನಮೂದಾಗಿದೆ.
ವ್ಯಕ್ತಿ ಯಾವ ಹುದ್ದೆಯಲ್ಲೇ ಇರಲಿ, ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳಂತೂ ಆ ವ್ಯಕ್ತಿಯ ಖಾಸಗಿ ಬದುಕಿನ ಕ್ಷಣಗಳು. ಹಾಗಂತ ಅವರಿರುವ ಹುದ್ದೆಗೆ ತಕ್ಕಂತೆ ಆಚರಿಸಿಕೊಳ್ಳಬೇಕು. ಆದರೆ ಅಲ್ಲಿನ ವ್ಯವಸ್ಥೆಯನ್ನೇ ದುರ್ಬಳಕೆ ಮಾಡಿಕೊಂಡಾಗಲಿ, ಉನ್ನತ ಶಿಕ್ಷಣ ಸಂಸ್ಥೆಯ ಲೆಟರ್ ಪ್ಯಾಡ್‌ಗೆ ಅದರದ್ದೇ ಆದ ಘನತೆ ಇರುತ್ತದೆ. ಆ ಸಂಸ್ಥೆಯನ್ನು ಪ್ರತಿನಿಧಿಸುವವರು ಮನಬಂದಂತೆ ಆ ಪತ್ರವನ್ನು ಬಳಸಿದರೆ ಆ ಪತ್ರಕ್ಕಿರುವ ಘನತೆ, ಗಾಂಭೀರ್ಯವನ್ನೇ ಅಳಿಸಿಹಾಕುವಂತೆ ವರ್ತಿಸುವುದು ಸರ್ವಥಾ ಸರಿಯಲ್ಲ ಎನ್ನುವುದು ಪ್ರಜ್ಞಾವಂತರ ಆರೋಪ.
ಹೀಗೆ ವಿಶ್ವವಿದ್ಯಾಲಯದಲ್ಲಿರುವ ಮಹತ್ವದ ಕಾರ್ಯಸೌಧದ ಸರ್ಕಾರಿ ವ್ಯವಸ್ಥೆಯನ್ನೇ ತಮ್ಮ ಹುಟ್ಟುಹಬ್ಬದಂತಹ ಖಾಸಗಿ ಕಾರ್ಯಕ್ರಮದ ಆಹ್ವಾನ ನೀಡಲು ಡಾ. ಪುಟ್ಟಯ್ಯ ಬಳಸಿಕೊಂಡಿರುವ ಸಂಗತಿ ಪ್ರಜ್ಞಾವಂತರು, ಚಿಂತಕರಿಂದ ತೀವ್ರ ಟೀಕಿಗೆ ಗುರಿಯಾಗಿದೆ.
ಜು.3ರಂದು 60ನೇ ಹುಟ್ಟುಹಬ್ಬದ ಜೊತೆಗೇ ವಿಸಿಯ ವೈವಾಹಿಕ ಜೀವನದ ಮಹೋತ್ಸವ ದಿನವೂ ಆಗಿತ್ತು. ಜೊತೆಗೇ ಅವರು 3 ವರ್ಷಗಳ ಹಿಂದೆ ಗುಲ್ಬರ್ಗ ವಿವಿ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡ ದಿನವೂ ಹೌದು. ಎಲ್ಲ ಸಂಭ್ರಮದ ಕ್ಷಣಗಳನ್ನು ಸೇರಿಸಿ ವಿಸಿ ನೀಡಿರುವ ಔತಣಕೂಟದೊಂದಿಗೆ ಹೊಸ ವಿವಾದ ತಗುಲಿಹಾಕಿಕೊಂಡಿದ್ದು ಮಾತ್ರ ವಿಪರ್ಯಾಸ.
ವಿಸಿ ಔತಣಕೂಟ ಆಮಂತ್ರಣಕ್ಕೆ ಕಚೇರಿ ಸದ್ಬಳಕೆ- ದುರ್ಬಳಕೆ ವಿಚಾರವಾಗಿ ನನಗೇನೂ ಗೊತ್ತಿಲ್ಲ, ನಾನು ಆ ಬಗ್ಗೆ ಏನನ್ನೂ ಹೇಳಲಾರೆ. ಆದರೆ ತಮ್ಮ ಹುಟ್ಟುಹಬ್ಬವಿದೆ, ಔತಣ ಏರ್ಪಡಿಸಿರುವೆ, ಸಹೋದ್ಯೋಗಿಗಳೆಲ್ಲರಿಗೂ ಆಹ್ವಾನಪತ್ರ ನೀಡಲು ಸೂಚಿಸಿದ್ದರು. ಅದರಂತೆ ಕೆಲಸ ಮಾಡಿರುವೆ.
- ಡಾ. ದಯಾನಂದ ಅಗಸರ್, ಕುಲಸಚಿವ, ಗುವಿವಿ
ತುಂಬ ಎತ್ತರದಲ್ಲಿದ್ದವರು ತಮ್ಮ ಸಮಾರಂಭಗಳ ಸುತ್ತಲಿನ ಸಣ್ಣಪುಟ್ಟ ವಿಷಯಗಳಿಗೂ ಲಕ್ಷ್ಯ ಕೊಡಲೇಬೇಕು. ಆದರೆ, ವಿವಿ ಲೆಟರ್ ಪ್ಯಾಡ್ ಬಳಸಿ ಖಾಸಗಿ ಔತಣಕೂಟಕ್ಕೆ ಆಹ್ವಾನಿಸಿರುವುದು ಅದೆಷ್ಟು ಸಮಂಜಸ? ಮೊದಲೇ ವಿವಾದಲ್ಲಿರುವ ಜ್ಞಾನಗಂಗೆಗೆ ಹೊಸ ವಿವಾದವೊಂದು ಸೇರ್ಪಡೆಯಾಗಿರುವುದು ದುರಂತ.
- ಅರುಣಕುಮಾರ್ ಪಾಟೀಲ್, ಅಧ್ಯಕ್ಷರು, ಜೈಕರವೇ, ಗುಲ್ಬರ್ಗ