ಸುರಪುರ-ಹುನಗುಂದ ರಾ.ಹೆ. ಕಾಮಗಾರಿಗೆ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ, ಸುರಪುರ, ಜು.4
ಕೆಂಭಾವಿ ಮಾರ್ಗದ ಸುರಪುರ- ಹುನುಗುಂದ ರಾಜ್ಯ ಹೆದ್ದಾರಿ- 60ಕ್ಕೆ ಶಾಸಕ ರಾಜಾ ವೆಂಕಟಪ್ಪನಾಯಕ ಅವರು ಸಿದ್ದಾಪುರ ಹನುಮಾನ ದೇವಸ್ಥಾನದ ಹತ್ತಿರ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯಿಂದ ಈ ರಸ್ತೆಯನ್ನು 48 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕಿಮೀ 83ರಿಂದ 129 ಕಿಮೀವರೆಗೆ ಈ ರಸ್ತೆ ಸುಧಾರಣೆಗೊಳ್ಳಲಿದೆ. ಇದರಿಂದ ನಾಗರಿಕರ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ: ರಸ್ತೆ ಕಾಮಗಾರಿ ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿಯೊಂದಿಗೆ ಮುಗಿಸಬೇಕು. ಕಾಮಗಾರಿ ಎಲ್ಲಿಯೂ ಕಳಪೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಮೇಲಿಂದ ಮೇಲೆ ಉಸ್ತುವಾರಿ ಮಾಡಿ ಪರಿಶೀಲಿಸಬೇಕು. ಸರ್ಕಾರದ ಕೆಲಸ ದೇವರ ಕೆಲಸ ಎಂದು ಭಾವಿಸಿ ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲ ರಸ್ತೆಗಳ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು. ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಯಂತೆ ರಸ್ತೆ ಸುಧಾರಣೆ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಮೊದಲಾದ್ಯತೆ ನೀಡುತ್ತೇನೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಹಕರಿಸಬೇಕೆಂದರು.
ಲೋಕೋಪಯೋಗಿ ಇಲಾಖೆಯ ಎಇಇ ಟಿ. ಪ್ರಹ್ಲಾದ್ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ವಿಠ್ಠಲ ಯಾದವ್, ತಾಪಂ ಸದಸ್ಯ ಮಾನಪ್ಪ ಸೂಗೂರು, ಮುಖಂಡರಾದ ಸೂಲಪ್ಪ ಕಮತಗಿ, ಶಿವಣ್ಣ ಮಂಗೀಹಾಳ, ವೆಂಕೋಬ ಮಂಗಳೂರು, ರಾಜಾ ವಾಸುದೇವನಾಯಕ, ದೊಡ್ಡ ದೇಸಾಯಿ, ಶರಣಗೌಡ ದೇವಾಪುರ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳು ಇದ್ದರು.