ಸಮರ್ಪಕ ಕುಡಿವ ನೀರಿನ ವ್ಯವಸ್ಥೆಗೆ ಸಜ್ಜಾಗಿ
ಕನ್ನಡಪ್ರಭ ವಾರ್ತೆ ಸುರಪುರ ಜು.5
ಮುಂಗಾರು ಆರಂಭದಲ್ಲಿ ಉತ್ತಮ ಮಳೆಯ ಮುನ್ಸೂಚನೆ ನೀಡಿತ್ತು. ಆದರೆ ವಾಡಿಕೆಯಷ್ಟು ಮಳೆಯಾಗದೇ ಇರುವುದರಿಂದ ರೈತರು ಆತಂಕದಲ್ಲಿದ್ದಾರೆ.
ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದೆ. ಇದನ್ನು ಗಮನಿಸಿದರೆ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಹೆಚ್ಚಾಗಿದೆ. ಕಾರಣ ಪುರಸಭೆ ನಾಗರಿಕರಿಗೆ ಕುಡಿವ ನೀರು ಒದಗಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸುವಂತೆ ಶಾಸಕ ರಾಜಾ ವೆಂಕಟಪ್ಪನಾಯಕ ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದರು.
ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಅವರನ್ನು ಭೇಟಿಯಾಗಿ ತಾಲೂಕಿನ ಸಮಸ್ಯೆಗಳ ಬಗ್ಗೆ ಸ್ಪಂದಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದ ಅವರು, ಆಧಾರ್ ಕಾರ್ಡ್‌ನ ನೋಂದಣಿಯ ಸಮಸ್ಯೆಯು ಹೆಚ್ಚಾಗಿದ್ದು, ತಕ್ಷಣ ಹೆಚ್ಚುವರಿ ಕೌಂಟರ್‌ಗಳನ್ನು ಆಯಾ ಗ್ರಾಪಂ ಕೇಂದ್ರಗಳಲ್ಲಿ ತೆಗೆದು ನೋಂದಣಿ ಆರಂಭಿಸಬೇಕು. ಆಧಾರ್ ಕಾರ್ಡ್ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಎಲ್ಲರೂ ಕಡ್ಡಾಯವಾಗಿ ಇದನ್ನು ಪಡೆಯಬೇಕು.
ಸುರಪುರದಲ್ಲಿ ಪರದಾಟ: ಆದರೆ ಸುರಪುರದಲ್ಲಿ ಅಂಚೆ ಕಚೇರಿಯೊಂದೇ ಲಕ್ಷಾಂತರ ಜನರಿಗೆ ನೋಂದಣಿ ಕೇಂದ್ರವಾಗಿದೆ. ನೋಂದಣಿಗಾಗಿ ತಾಲೂಕಿನ ಜನತೆ ದಿನನಿತ್ಯವು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನವೂ ಕೇವಲ 20- 30 ನೋಂದಣಿಗಳು ಮಾತ್ರ ಮಾಡಲಾಗುತ್ತಿದೆ. ಕಾರಣ ತಕ್ಷಣ ಆಧಾರ್ ಕೇಂದ್ರಗಳ ಕೌಂಟರ್‌ಗಳನ್ನು ಹೆಚ್ಚಿಸಬೇಕೆಂದು ಶಾಸಕ ರಾಜಾ ವೆಂಕಟಪ್ಪನಾಯಕ ಒತ್ತಾಯಿಸಿದರು.