ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಷ್ಟವಿಲ್ಲದಿದ್ರೆ ರಾಜಿನಾಮೆ ಕೊಡ್ರಿ

Mainashree
Updated On : 7 Jul 2013, 11:41 am

ಕನ್ನಡಪ್ರಭ ವಾರ್ತೆ  ಅಫಜಲ್ಪುರ  ಜು.6
ಗ್ರಾಪಂ ಕಾರ್ಯದರ್ಶಿ ಮತ್ತು ಪಿಡಿಒ ಕಾರ್ಯವೈಖರಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ, ನಿಮಗೆ ಕೆಲಸ ಮಾಡಲು ಬೇಜಾರಾದರೆ ಕೆಲಸಕ್ಕೆ ರಾಜಿನಾಮೆ ನೀಡಿ ಮನೆಗೆ ಹೋಗಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಪಂ ಸಭಾಂಗಣದಲ್ಲಿ ಪ್ರಗತಿ ಪರಿಶಿಲನಾ ಸಭೆ ನಡೆಸಿ ಮಾತನಾಡಿ, 13ನೇ ಹಣಕಾಸು ಯೋಜನೆಯಡಿಯಲ್ಲಿ ಕ್ರಿಯಾಯೋಜನೆ ತಯಾರಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಪಿಡಿಒಗಳಿಗೆ ತಾಕೀತು ಮಾಡಿದರು.
ಕರ್ತವ್ಯಲೋಪವಾದ್ರೆ ಶಿಸ್ತು ಕ್ರಮ: ನೋಡಲ್ ಅಧಿಕಾರಿಗಳು ಗ್ರಾಪಂ.ಗಳಿಗೆ ಭೇಟಿ ನೀಡಿದಾಗ ತಾಪಂ ಇಒ ಅವರಿಗೆ ಮಾಹಿತಿ ನೀಡಬೇಕು. ಪಿಡಿಒಗಳು ಕಡ್ಡಾಯವಾಗಿ ಕರ ವಸೂಲಾತಿಯ ನಿಗದಿತ ಗುರಿ ಮುಟ್ಟಬೇಕು. ಕಾರ್ಯದರ್ಶಿಗಳು ಹಾಗೂ ಪಿಡಿಒಗಳು ತಮ್ಮ ಕೇಂದ್ರ ಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸಬೇಕು. ಇಲ್ಲದಿದ್ದಲ್ಲಿ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಇದೇ ತಿಂಗಳ 8ರೊಳಗಾಗಿ ಎಲ್ಲ ಗ್ರಾಪಂ.ಗಳಲ್ಲಿ ಗ್ರಾಮ ಸಭೆ ನಡೆಸಿದ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಬೇಕು. ನಿರ್ಮಲ ಭಾರತ ಯೋಜನೆಯಡಿ ಪ್ರತಿ ವರ್ಷ ಕನಿಷ್ಠ 180 ಶೌಚಾಲಯಗಳನ್ನು ನಿರ್ಮಿಸಬೇಕು. ಉದ್ಯೋಗ ಖಾತ್ರಿಯಡಿಯಲ್ಲಿ ಸಾಕಷ್ಟು ಅನುದಾನವಿದ್ದು ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಇಂದಿರಾ ಆವಾಸ್ ರದ್ದತಿಗೆ ಪಿಡಿಒ ಕಾರಣ: ಪಿಡಿಒಗಳ ನಿರ್ಲಕ್ಷ್ಯದಿಂದ ಇಂದಿರಾ ಆವಾಸ್ ಯೋಜನೆಯಲ್ಲಿ ಬಂದಂತ ಮನೆಗಳನ್ನು ಜಿಪಿಎಸ್ ಮಾಡದೇ ಇರುವುದರಿಂದ ರದ್ದಾಗಿವೆ ಈ ಕುರಿತು ಮಾಹಿತಿ ನೀಡಬೇಕು. 2011- 12ನೇ ಸಾಲಿನ ಅಂಬೇಡ್ಕರ್ ಯೋಜನೆಯಡಿಯಲ್ಲಿ ಉಳಿದಂತ ಮನೆಗಳನ್ನು ಪೂರ್ಣಗೊಳಿಸುವಂತೆ  ಪಿಡಿಒಗಳಿಗೆ ತಾಕೀತು ಮಾಡಿದರು. ಕ್ರಿಯಾಯೋಜನೆಗಳನ್ನು ತಯಾರಿಸುವಾಗ ಗ್ರಾಪಂ ಅಧ್ಯಕ್ಷರ ಸಹಿ ಪಡೆದು ಅನುಮೋದನೆಗೆ ಕಳುಹಿಸಬೇಕೆಂದು ಸೂಚಿಸಿದರು.
ಪಂಚತಂತ್ರ ನಿರ್ವಹಿಸಿ: ಸಾಮಾನ್ಯ ಸಭೆ, ವಾರ್ಡ್ ಸಭೆ, ಕರ ವಸೂಲಿ ಕುರಿತು ಪಂಚತಂತ್ರದಲ್ಲಿ ಅಳವಡಿಸಬೇಕು ಎಂದ ಅವರು, ತಾಲೂಕಿನ 22 ಗ್ರಾಪಂ.ಗಳಲ್ಲಿ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ನಿಡಬೇಕು. ಗ್ರಾಪಂಗಳಲ್ಲಿ ಸ್ಥಾಯಿ ಸಮಿತಿಗಳನ್ನು ಶೀಘ್ರದಲ್ಲೇ ರಚಿಸಬೇಕು ಎಂದರು.
ಮಣ್ಣೂರ ಗ್ರಾಪಂ ಅಧ್ಯಕ್ಷ ರಮೇಶ ಬಾಕೆ ಮಾತನಾಡಿ, ವೈಯಕ್ತಿಕ ಶೌಚಾಲಯಕ್ಕಾಗಿ ಬರುವ ಅನುದಾನ ಇನ್ನೂ ಹೆಚ್ಚಿಸಬೇಕು. ಈಗ ನೀಡುವ ಅನುದಾನ ಸಾಲುತ್ತಿಲ್ಲ. ಹೀಗಾಗಿ ವೈಯಕ್ತಿಕ ಶೌಚಾಲಯದ ಅನುದಾನ ಸಾಲುತ್ತಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಮುಖ್ಯ ಯೋಜನಾಧಿಕಾರಿ ವಿರುಪಾಕ್ಷಪ್ಪ, ವ್ಯವಸ್ಥಾಪಕ ಬಸವರಾಜ ಪಾಟೀಲ್, ಲೆಕ್ಕವಿಭಾಗದ ಹೊನ್ನಲಿಂಗಪ್ಪ, ಸಂಪತಕುಮಾರ್ ಪಾಟೀಲ್, ತಾಪಂ ಅಧಿಕಾರಿ ಎಸ್.ಪಿ ನಂದಗಿರಿ, ವಿವಿಧ ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement