ಎಸ್ಪಿ ವರ್ಗಾವಣೆ ಹಿಂದೆ ರಾಜಕೀಯ ಚಿತಾವಣೆ?
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜು.6
ಹುಬ್ಬೇರಿಸಬೇಡಿ, ಇದು ವಾಸ್ತವ. ಜಿಲ್ಲಾ ಖಾಕಿಪಡೆಯ ಸಾರಥ್ಯ ವಹಿಸಿದ್ದ ಏಳೆಂಟು ತಿಂಗಳಲ್ಲೇ ಎಸ್ಪಿ ಎನ್ ಸತೀಶ ಕುಮಾರ್ ಇಲ್ಲಿಂದ ಎತ್ತಂಗಡಿಯಾಗಿದ್ದಾರೆ.
ನಿಯಮಗಳ ಪ್ರಕಾರ ಹೇಳುವುದಾದಲ್ಲಿ ಈ ವರ್ಗಾವಣೆ ಅವಧಿಗೂ ಮುನ್ನ (ಪ್ರಿಮೆಚೂರ್) ಆದದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಂತ ಹೀಗೆ ಆಗಬಾರದು ಅಂತ ನಿಯಮಗಳೇನೂ ಇಲ್ಲ. ಡಿಸಿ- ಎಸ್ಪಿಯಂತಹ ಕಾರ್ಯಕಾರಿ (ಎಕ್ಸಿಕ್ಯುಟಿವ್) ಹುದ್ದೆಗಳಲ್ಲಿ ವರ್ಗಾವಣೆಗೆ ಇಂತಿಷ್ಟೇ ಅವಧಿ ಅಂತೇನು ಇರೋದಿಲ್ಲ.
ಏಕಾಏಕಿ ಆದೇಶ: ಆದಾಗ್ಯೂ ಸಾಮಾನ್ಯವಾಗಿ 1 ರಿಂದ 3 ವರ್ಷಗಳ ಕಾಲಾವಧಿಯಂತೂ ಇದ್ದೇ ಇರುತ್ತದೆ. ಆದರೆ ಸತೀಶ ಕುಮಾರ್ ವರ್ಗಾವಣೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಇಂತಹ ಯಾವ ಪರಂಪರೆಗಳಿಗೂ ಜೋತು ಬೀಳದೆ ಏಕದಂ ಕಡ್ಡಿ ತುಂಡು ಮಾಡಿದಂತೆ ಬಿಸಿಲೂರಿನಿಂದ ಉದ್ಯಾನ ನಗರಿ ಬೆಂಗಳೂರಿಗೆ ವರ್ಗ ಮಾಡಿ ಇಲ್ಲಿನ ಜನರನ್ನೆಲ್ಲ ದಂಗು ಬಡಿಸಿದೆ. ಈ ವರ್ಗಾವಣೆ ಯಾಕಾಯ್ತೋ ಎಂದು ಜಿಲ್ಲೆಯ ಜನತೆ, ಪ್ರಜ್ಞಾವಂತರು ತಮ್ಮೊಳಗೆ ಚರ್ಚೆಯಲ್ಲಿ ತೊಡಗಿದ್ದಾರೆ. ಸರ್ಕಾರ ಹೊಸತು ಬಂದಿದೆ, ಬೇಕಾದ ಅಧಿಕಾರಿಗಳ ವರ್ರ್ಗಾವರ್ಗಿ ಸಾಮಾನ್ಯ. ಆದರೆ ಜನಪರ ಪೊಲೀಸಿಂಗ್ ಏನೆಂದು ಇಲ್ಲಿ ಪರಿಚಯಿಸುವ ಹಂತದಲ್ಲಿದ್ದ ಎಸ್ಪಿಗೆ ಹಿಂದೆ ಮುಂದೆ ನೋಡದೆ ಎತ್ತಂಗಡಿ ಮಾಡಿದ್ದು ಸರಿಯೆ ಎಂಬ ಪ್ರಶ್ನೆ ಇದೀಗ ನಗರ ಹಾಗೂ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಎರಡು ಧೋರಣೆಗಳು: ಇವರ ಕಾರ್ಯವೈಖರಿ ಹತ್ತಿರದಿಂದ ಬಲ್ಲವರು ಹೇಳುವಂತೆ ಇವರ 2 ಪ್ರಮುಖ ಧೋರಣೆಗಳೇ ಇವರನ್ನು ಗುಲ್ಬರ್ಗದಿಂದ ಎತ್ತಂಗಡಿ ಮಾಡಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ಇವರು ಇಲ್ಲಿನ ರಾಜಕೀಯ ನಾಯಕರು, ಸಮಾಜ ಮುಖಂಡರುಗಳ ಸೂಚನೆಗಳನ್ನಷ್ಟೆ ಅಲ್ಲದೆ, ಇಂತಹ ಯಾವ ಸೂಚನೆಗಳು ಇಲ್ಲದೆಯೂ ನೇರವಾಗಿ ತಮ್ಮ ಗಮನಕ್ಕೆ ಬರುವ ಸಮಸ್ಯೆಗಳನ್ನೆಲ್ಲ ಮುತುವರ್ಜಿ ವಹಿಸಿ ಪರಿಹರಿಸಿದ್ದು.
ಇನ್ನೊಂದು ಇವರು ತಮ್ಮ ಖಾಕಿಪಡೆ ವ್ಯವಸ್ಥೆಯಲ್ಲಿ 2 ನೇ ಹಾಗೂ ಮೂರನೇ ಹಂತದಲ್ಲಿನ ಅಧಿಕಾರಿ ವರ್ಗದಲ್ಲಿ ತುಂಬ ಕಟ್ಟುನಿಟ್ಟು ನಿಯಮಗಳ ಪಾಲನೆಗೆ ಹಚ್ಚಿದ್ದು, ಜೊತೆಗೇ ಇಲ್ಲಿನ ಅಧಿಕಾರಿಗಳಲ್ಲಿ ಬೇರೂರಿದ್ದ ಠಾಣೆಗಳ ವ್ಯಾಪ್ತಿ ವಿಚಾರದಲ್ಲಿನ ಜಡತ್ವ ಹೋಗಲಾಡಿಸಲು ಸಾಮ, ಭೇದ ಸೇರಿದಂತೆ ಎಲ್ಲಾ ಉಪಾಯಗಳನ್ನು ಬಳಸಿದ್ದು ಎಂದು ಪರಾಮರ್ಶಿಸಲಾಗುತ್ತಿದೆ.
ಇದಲ್ಲದೆ ಅದಾಗಲೇ 2 ತಿಂಗಳ ಹಿಂದೆಯೇ ಇಲ್ಲಿನ ಪೊಲೀಸ್ ಬಲದಲ್ಲಿದ್ದ 2 ನೇ, 3 ನೇ ಸಾಲಿನ ಅಧಿಕಾರಿಗಳೆಲ್ಲರೂ ಗುಂಪಾಗಿ ಎಸ್ಪಿ ಸತೀಶ ಕುಮಾರ್ ಅವರ ವಿರುದ್ಧ ಶೀತಲ ಸಮರ ಸಾರಿದ್ದರಲ್ಲದೆ ಐಜಿಪಿ ಬಳಿಯೂ ದೂರು ಕೊಂಡೊಯ್ದಿದ್ದರು. ಇವೆಲ್ಲದರ ಒಟ್ಟು ಪರಿಣಾಮವೇ ಜನ ಮೆಚ್ಚುಗೆಗೆ ಪಾತ್ರವಾಗುತ್ತ ಸಾಗಿದ್ದ ಎಸ್ಪಿ ಸತೀಶ ವರ್ಗಾವಣೆ ಎಂದು ಹೇಳಲಾಗುತ್ತಿದೆ.
ಜಡತ್ವ ಬಿಡಿಸಿದ್ದರು: 16ಕ್ಕೂ ಹೆಚ್ಚು ಟ್ಯಾಂಗೋ ವಾಹನಗಳ ಜಾಲ ರೂಪಿಸಿ ಗುಲ್ಬರ್ಗ ಸೇಫ್ ಸಿಟಿ ಪ್ರಾಜೆಕ್ಟ್ ರೂಪಿಸಿದ್ದರು. ಸಿಸಿ ಟೀವಿ ಕೆಮರಾ ಅಳವಡಿಸಿ ನಗರದ ಪ್ರಮುಖ ವೃತ್ತಗಳಲ್ಲಿನ ಆಗುಹೋಗುಗಳ ಮೇಲೆ ನಿಗಾ ಇಡುವ ಪ್ರಯತ್ನ ಸಹ ಇವರ ಕಾಲದಲ್ಲೇ ತೀವ್ರವಾಗಿ ನಡೆದಿತ್ತು. ಜೊತೆಗೇ ನಗರದ ದೊಡ್ಡ ವಹಿವಾಟುದಾರರು, ಲಾಡ್ಜ್, ಬಾರ್ಗಳಲ್ಲಿ ಸಿಸಿ ಟೀವಿ ಕೆಮೆರಾ ಅಳವಡಿಕೆ ಕಡ್ಡಾಯ ಮಾಡುವ ಮೂಲಕ ನಗರದಲ್ಲಿನ ಅಪರಾಧ ನಿಯಂತ್ರಣಕ್ಕೆ ಯತ್ನಿಸಿದ್ದರು. ಮುಖ್ಯವಾಗಿ ಪ್ರವೀಣ ಪವಾರ್ ಅವರ ಅವಧಿಯಿಂದ ಇಲ್ಲಿನ ಖಾಕಿ ಪಡೆಗೆ ಆವರಿಸಿದ್ದ ಎಲ್ಲಾ ಹಂತಗಳಲ್ಲಿನ ಜಡತ್ವ ಕಳೆದೊಗೆಯುವಲ್ಲಿ ಸತೀಶ ಕುಮಾರ್ ಆರಂಭದಲ್ಲೇ ಯಶ ಕಂಡಿದ್ದರು ಎಂಬುದಕ್ಕೆ ಕಲೆದ 8 ತಿಂಗಳಲ್ಲಿ ಗುಲ್ಬರ್ಗದಲ್ಲಿ ನಡೆದ ಹಲವು ಬಂಧನಗಳು, ಗ್ಯಾಂಗ್ಗಳ ಹತ್ತಿಕ್ಕುವ ಕೆಲಸಗಳು, ಕೆಲವು ಅಪರಾಧ ಪ್ರಕರಣಗಳಲ್ಲಿ ಖದೀಮರನ್ನು ಪತ್ತೆ ಹಚ್ಚುವ ಪೊಲೀಸ್ ವೃತ್ತಿಪರತೆಗಳೇ ಕನ್ನಡಿ
ಸದ್ಯ ಪೊಲೀಸ್ ವ್ಯವಸ್ಥೆಯಲ್ಲಿರುವ ಅನೇಕ ಹಿರಿಯ ಅಧಿಕಾರಿಗಳ ಪ್ರಕಾರ ಗುಲ್ಬರ್ಗದಲ್ಲಿನ ಪೊಲೀಸ್ ಬಲದಲ್ಲಿ ಕಂಡಿರುವ ಸದ್ಯದ ವಾತಾವರಣ ತುಂಬ ಡೆಲಿಕೇಟ್ ಆಗಿದೆ
ಬೇಳೆ ಬೇಯಿಸಿಕೊಳ್ಳುವ ಕಾಯಕ: ಹಿರಿಯ ಅಧಿಕಾರಿಗಳೇ ಹೆಸರು ಬಹಿರಂಗ ಪಡಿಸುವುದು ಬೇಡ ಎಂಬ ಷರತ್ತಿನೊಂದಿಗೆ ಕನ್ನಡಪ್ರಭ ಜೊತೆ ಮಾತನಾಡುತ್ತ, ಜನಸ್ನೇಹಿ ಪೊಲೀಸಿಂಗ್ಗೆ ಯಾರ ಒಲವು ಇಲ್ಲ. ರಾಜಕೀಯ ನಾಯಕರ ಬಾಲ ಬಡುಕತನ ಇಲ್ಲಿ ನಿತ್ಯದ ಕೆಲಸ ಕಾರ್ಯಗಳಲ್ಲೇ ತನ್ನ ಬಾಲ ಬಿಚ್ಚುತ್ತಿದೆ. ಇದರಿಂದಲೇ ಅನೇಕರು ತಮ್ಮ ನಿತ್ಯದ ಬೇಳೆ ಬೇಯಿಸಿಕೊಂಡು ಕೆಲಸವನ್ನೇ ಮರೆತಿದ್ದಾರೆ ಎಂಬ ಆತಂಕದ ಸಂಗತಿಗಳನ್ನು ಹೊರಹಾಕಿದ್ದು, ಇಲ್ಲಿನ ಒಟ್ಟಾರೆ ಬೆಳವಣಿಗೆಗೆ ಸಾಕ್ಷಿ.
ಜಿಲ್ಲಾ ಉಸ್ತುವಾರಿ ಸಚಿವರಿಗೂ ಗೊತ್ತಿಲ್ಲವೆ?: ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರಿಗೂ ಎಸ್ಪಿ ಸತೀಶ ಕುಮಾರ್ ವರ್ಗಾವಣೆ ವಿಚಾರ ಗೊತ್ತಿರಲಿಲ್ಲವಂತೆ. ಈ ಬಗ್ಗೆ ಕನ್ನಡಪ್ರಭ ಸಚಿವರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನಗಳು ವಿಫಲವಾದವು. ಅವರ ಬೆಂಬಲಿಗರು ಅನೇಕರು ಎಸ್ಪಿ ವರ್ಗಾವಣೆ ವಿಚಾರವಾಗಿ ಇಸ್ಲಾಂ ಅವರೂ ಅಚ್ಚರಿ ವ್ಯಕ್ತಪಡಿಸಿದ್ದಾರೆಂದು ಕನ್ನಡಪ್ರಭ ಜೊತೆ ಮಾತನಾಡುತ್ತ ಹೇಳಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶರನ್ನೂ ಈ ವಿಚಾರವಾಗಿ ಗಮನ ಸೆಳೆಯಲು ಕನ್ನಡಪ್ರಭ ಅವರ ಮೊಬೈಲ್ಗೆ ಫೋನ್ ಮಾಡಿದರೂ ಅವರು ಯಾವುದೇ ಕರೆ ಸ್ವೀಕರಿಸಲಿಲ್ಲ. ಮರಳಿಯೂ ಕರೆ ಮಾಡಿ ಮಾತನಾಡಲಿಲ್ಲ.
ಶೇಷಮೂರ್ತಿ ಅವಧಾನಿ