ಜಿಲ್ಲೆಯ 4 ಕಡೆ ಶೀಘ್ರ ಕೆನರಾ ಬ್ಯಾಂಕ್ ಶಾಖೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜು.6
ಕೆನರಾ ಬ್ಯಾಂಕ್ ಜಿಲ್ಲೆಯಲ್ಲಿ ತನ್ನ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸಲು ಮುಂದಾಗಿದೆ. ಈ ವಿಸ್ತರಣಾ ಯೋಜನೆಯ ಅಂಗವಾಗಿ ಇಲ್ಲಿನ ವೃತ್ತ ಕಚೇರಿಯ ವ್ಯಾಪ್ತಿಯಲ್ಲಿ ಶೀಘ್ರದಲ್ಲೇ 25 ಸ್ಥಳಗಳಲ್ಲಿ ಬ್ಯಾಂಕ್ ನೂತನ ಶಾಖೆಗಳನ್ನು ಆರಂಭಿಸಲಿದೆ.
ಬಾಗಲಕೋಟೆ, ಬಿಜಾಪುರ ಸೇರಿದಂತೆ ಉ- ಕ ಭಾಗದ ಹಲವು ಜಿಲ್ಲೆಗಳ ಮಹತ್ವದ ಪಟ್ಟಣ ಹಾಗೂ ಗುಲ್ಬರ್ಗ ಜಿಲ್ಲೆಯ ಮಹಾರಾಷ್ಟ್ರ ರಾಜ್ಯದ ಗಡಿ ಭಾಗದಲ್ಲಿರುವ ಅಫಜಲ್ಪುರ, ಆಳಂದ, ಕಡಗಂಚಿ ಹಾಗೂ ಜೇವರ್ಗಿಗಳಲ್ಲಿಯೂ ನೂತನ ಶಾಖೆಗಳ ಸ್ಥಾಪನೆಗೆ ಯೋಜನೆ ಸಿದ್ಧಪಡಿಸಿದೆ. ನೂತನ ಶಾಖೆ ಸ್ಥಾಪನೆಯ ತಾಂತ್ರಿಕ ಪ್ರಕ್ರಿಯೆಗಳು ಸಾಗಿವೆ. ಇನ್ನೇನು ಶೀಘ್ರದಲ್ಲೇ ಇವೆಲ್ಲ ಶಾಖೆಗಳನ್ನು ಜನತೆಯ ಸೇವೆಗೆ ಅರ್ಪಿಸಲಾಗುತ್ತದೆ ಎಂದು ಕೆನರಾ ಬ್ಯಾಂಕ್ ಗುಲ್ಬರ್ಗ ವೃತ್ತ ಕಚೇರಿಯ ಸಹಾಯದ ಮಹಾ ಪ್ರಬಂಧಕ(ಮಾರುಕಟ್ಟೆ) ಎಂ.ಸುರೇಂದ್ರನಾಥ ತಿಳಿಸಿದ್ದಾರೆ.
ವಿಳಂಬವಿಲ್ಲದೆ ಸೇವೆ: ಕೆನರಾ ಬ್ಯಾಂಕ್ ಗುಲ್ಬರ್ಗ ಕೇಂದ್ರವಾಗಿರುವಂತೆ ವೃತ್ತ ಕಚೇರಿಯನ್ನು ಹೊಂದಿದೆ. ಆದ್ದರಿಂದ ಈ ಪ್ರದೇಶದಲ್ಲಿ ಬ್ಯಾಂಕಿನ ವಿವಿಧ ಯೋಜನೆಗಳ ಅರಿವು ಮೂಡಿಸುವುದು ಹಾಗೂ ಆ ಸೇವೆಗಳನ್ನು ಜನತೆಗೆ ಯಾವುದೇ ವಿಳಂಬವಿಲ್ಲದಂತೆ ತಲುಪಿಸುವುದೇ ತಮ್ಮ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಚಾರ ರ್ಯಾಲಿ: ಗೃಹ ನಿರ್ಮಾಣ, ವಾಹನ, ವ್ಯಾಪಾರ, ಕೃಷಿ, ನೀರಾವರಿ ಮುಂತಾದ ರಂಗಗಳಲ್ಲಿ ರೈತರು, ಉದ್ದಿಮೆದಾರರ ಅಗತ್ಯಗಳಿಗೆ ತಕ್ಕಂತೆ ಬ್ಯಾಂಕ್ ಹೊಂದಿರುವ ಯೋಜನೆಗಳನ್ನು ಜನರಿಗೆ ತಲುಪಿಸಲು ಜನಜಾಗೃತಿ ರ್ಯಾಲಿಯನ್ನು ನಗರದಲ್ಲಿ ಜು.8ರಂದು ಬೆ.10ಕ್ಕೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕೆನರಾ ಬ್ಯಾಂಕ್ ಉಪ ಮಹಾಪ್ರಬಂಧಕ ಬಿ.ಎಂ. ರಾವ್ ರ್ಯಾಲಿಗೆ ಚಾಲನೆ ನೀಡಲಿದ್ದಾರೆ. ಅಧಿಕಾರಿಗಳಾದ ಬಿ. ಕೃಷ್ಣಾರೆಡ್ಡಿ, ಪ್ರಕಾಶ ಹಂಡೆ, ಪಿಎಸ್‌ಎನ್ ಮೂರ್ತಿ, ಸಿಜಿ ಚಂದ್ರಮೌಳಿ, ಎಸ್.ಎಸ್. ಮೂರ್ತಿ ಹಾಗೂ ಚಿನ್ನಂದಿ ಭಾಗವಹಿಸಲಿದ್ದಾರೆ ಎಂದು ಸಹಾಯಕ ಮಹಾ ಪ್ರಬಂಧಕ ಸುರೇಂದ್ರನಾಥ ಹೇಳಿದ್ದಾರೆ.