ನೂತನ ಎಸ್ಪಿ ಅಮಿತ್ ಸಿಂಗ್
ಗುಲ್ಬರ್ಗ: ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಯಾಗಿ 2007ರ ಐಪಿಎಸ್ ಬ್ಯಾಚ್ ಅಧಿಕಾರಿ ಅಮಿತ್ಸಿಂಗ್ ಶನಿವಾರ ಅಧಿಕಾರ ವಹಿಸಿಕೊಂಡರು. ಇಲ್ಲಿ ಕಳೆದ 8 ತಿಂಗಳಿಂದ ಎಸ್ಪಿಯಾಗಿದ್ದ ಎನ್. ಸತೀಶ ಕುಮಾರ್ ಅವರನ್ನು ಸರ್ಕಾರ 2 ದಿನಗಳ ಹಿಂದಷ್ಟೆ ಬೆಂಗಳೂರು ಎಐಜಿಪಿಯಾಗಿ ವರ್ಗಮಾಡಿತ್ತಲ್ಲದೆ ಈ ಸ್ಥಾನಕ್ಕೆ ಹಾಸನದ ಎಸ್ಪಿಯಾಗಿದ್ದ ಅಮಿತ್ ಸಿಂಗ್ರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಮೂಲತಃ ಬಿಹಾರ ರಾಜ್ಯದ ಪಾಟ್ನಾದವರಾಗಿರುವ ಅಮೀತ್ಸಿಂಗ್ 2007 ಐಪಿಎಸ್ ಅಧಿಕಾರಿ. ಪುತ್ತೂರು, ಮಂಗಳೂರು ಎಎಸ್ಪಿಯಾಗಿ ಕೆಲಸ ಮಾಡಿರುವ ಇವರು ತಮ್ಮ ಪ್ರೋಬೇಷ್ನರಿ ಅವಧಿಯನ್ನು ಹಾಸನ ಜಿಲ್ಲೆಯಲ್ಲೇ ಪೂರೈಸಿದವರು. ಕಳೆದ 2ವರ್ಷ 3ತಿಂಗಳ ಕಾಲ ಹಾಸನದ ಎಸ್ಪಿಯಾಗಿ ಕರ್ತವ್ಯದಲ್ಲಿದ್ದ ಇವರು ಜುಲೈ 6 ಶನಿವಾರ, 2013 ರಿಂದ ಗುಲ್ಬರ್ಗ ಜಿಲ್ಲೆ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿಯೇ ತಮ್ಮ ಪೊಲೀಸ್ ಕರಿಯರ್ ಆರಂಭಿಸಿ ಅಲ್ಲಿಯೇ ಎಸ್ಪಿಯಾಗಿಯೂ ಕೆಲಸ ನಿರ್ವಹಿಸಿದ ಅನುಭವವಿರುವ ಅಮೀತ್ಸಿಂಗ್ ಅವರಿಗೆ ಉತ್ತರ ಕರ್ನಾಟಕ, ಅದರಲ್ಲೂ ಹೈ-ಕ ನೆಲದ ಪ್ರಮುಖ ಸ್ಥಾನ ಗುಲ್ಬರ್ಗ ಜಿಲ್ಲೆ ಹೊಸತು. ಆದಾಗ್ಯೂ ಗುಲ್ಬರ್ಗ ಜಿಲ್ಲೆಯ ಎಸ್ಪಿಯಾಗಿ ಕೆಲಸ ಮಾಡುವುದು ಸವಾಲು, ಅದಕ್ಕೇ ಇಲ್ಲಿನ ವರ್ಗಾವಣೆಯನ್ನು ತುಂಬ ಸವಾಲಾಗಿಯೇ ಸ್ವೀಕರಿಸಿದ್ದಾಗಿ ಅಮಿತ್ ಸಿಂಗ್ ಹೇಳಿದ್ದಾರೆ.