ಪಿಡಿಎ ಕಾಲೇಜಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಗುಲ್ಬರ್ಗ: ನಗರದ ಪೂಜ್ಯ ದೊಡ್ಡಪ್ಪ ಅಪ್ಪಾ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಶನಿವಾರ ಹಮ್ಮಿಕೊಳ್ಳಲಾದ ಪದವಿ ಪ್ರದಾನದ ಸಮಾರಂಭದಲ್ಲಿ 660 ವಿದ್ಯಾರ್ಥಿಗಳಿಗೆ ಮತ್ತು 136 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಲಾಯಿತು.
ಚಿನ್ನದ ಪದಕ: ಪದವಿ ಹಂತದ 16 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು 8 ಜನ ಸ್ನಾತಕೋತ್ತರ ಪದವೀಧರರಿಗೆ ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಲಾಯಿತು. ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹೆಚ್ಚು ಅಂಕಗಳನ್ನು ಪಡೆದ ನಿದಾ ಸುಮಯ್ಯನವರಿಗೆ ಒಟ್ಟು 5 ಚಿನ್ನದ ಪದಕಗಳನ್ನು ನೀಡಿ ಸನ್ಮಾನಿಸಲಾಯಿತು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷ ಡಾ.ಎಸ್.ಎಸ್. ಮಂತಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡುತ್ತ, ಇಂದಿನ ಯುಗದಲ್ಲಿ ಯಶಸ್ಸನ್ನು ಸಾಧಿಸಲು ಇನ್ನೊಬ್ಬರನ್ನು ಪಕ್ಕಕ್ಕೆ ತಳ್ಳಿ ಮುನ್ನುಗ್ಗುವ ಪ್ರವೃತ್ತಿ ಹೆಚ್ಚುತ್ತಿದೆ. ಇಂಥವರ ಪಿತೂರಿಗೆ ಬಲಿಯಾಗದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.
ಸೋಲೇ ಗೆಲವಿನ ಮೆಟ್ಟಿಲು ಎಂದು ವ್ಯಾಖ್ಯಾನಿಸಿ, ಪ್ರತಿ ಬಾರಿಯ ವಿಫಲತೆ ಇನ್ನೂ ಹೆಚ್ಚಿನದನ್ನು ಕಲಿಯಬೇಕು ಎಂಬುವುದನ್ನು ಮನದಟ್ಟು ಮಾಡುತ್ತದೆ. ತತ್ವಗಳಿಗೆ ಬದ್ಧರಾಗಿರುವುದರ ಜತೆಗೆ ಛಲಗಾರರಾಗಿ ಆತ್ಮಬಲದಲ್ಲಿ ವಿಶ್ವಾಸ ಹೊಂದಬೇಕು ಎಂದು ಕರೆ ನೀಡಿದರು.
ಹೊಣೆಗಾರಿಕೆ: ನೀವು ಈಗ ಪದವೀಧರರಾಗಿದ್ದೀರಿ. ಭ್ರಷ್ಟಾಚಾರದ ನಿರ್ಮೂಲನೆಗಾಗಿ ಮತ್ತು ನೈತಿಕ ಮೌಲ್ಯಗಳ, ದೇಶಪ್ರೇಮ ಹಾಗೂ ರಾಷ್ಟ್ರೀಯ ಭಾವೈಕ್ಯತೆಗೆ ಉತ್ತೇಜನ ನೀಡಲು ಶ್ರಮಿಸುತ್ತಿರುವವರಿಗೆ ಪ್ರೋತ್ಸಾಹ ನೀಡುವ ಗುರುತರ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದರು.
ಹೈ-ಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಶೀಲ್ ಜಿ. ನಮೋಶಿ, ಉಪಾಧ್ಯಕ್ಷ ಬಾಬುರಾವ್ ಮಂಗಾನೆ, ಕಾರ್ಯದರ್ಶಿ ಶರದ ಎಂ.ರಾಂಪುರೆ, ಎಚ್. ಯು. ತಳವಾರ್, ಡಾ.ಕೆ.ಇ. ಪ್ರಕಾಶ, ಡಾ.ಎಸ್.ಆರ್. ಪಾಟೀಲ್ ಮತ್ತಿತರ ಗಣ್ಯರು ಇದ್ದರು. ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಎಸ್. ಹೆಬ್ಬಾಳ ಸ್ವಾಗತಿಸಿದರು.