ಮತ್ತೆ ನಾಲೆ ಕುಸಿತ; ಕಾಮಗಾರಿ ಬಣ್ಣ ಬಯಲು
ಕನ್ನಡಪ್ರಭ ವಾರ್ತೆ ಹುಣಸಗಿ ಜು.6
ನಾರಾಯಣಪುರ ಎಡದಂಡೆ ಕಾಲುವೆ ದುರಸ್ತಿ, ನವೀಕರಣ ಇತ್ಯಾದಿ ಕಾಮಗಾರಿಗಳಿಗಾಗಿ ಪ್ರತಿ ವರ್ಷ ಕೋಟ್ಯಂತರ ರು. ಖರ್ಚು ಮಾಡುತ್ತಿದ್ದರೂ ಮತ್ತೆ ಬಿರುಕು ಬಿಟ್ಟು ಅವಾಂತರ ಸೃಷ್ಟಿಯಾಗುವುದು ಸಾಮಾನ್ಯವಾಗಿದೆ.
ಈ ವರ್ಷವೂ ಎಡದಂಡೆ ಮುಖ್ಯ ಕಾಲುವೆಯ ಅಗತೀರ್ಥ ಬಳಿ 60ನೇ ಕಿ.ಮೀ. ಭಾಗದಲ್ಲಿ ಎರಡು ಅಡಿ ಕುಸಿತ ಕಂಡುಬಂದಿದ್ದು, ಅಚ್ಚುಕಟ್ಟು ಪ್ರದೇಶದ ರೈತರ ಆತಂಕಕ್ಕೆ ಕಾರಣವಾಗಿದೆ. ಸರ್ವಿಸ್ ರಸ್ತೆಯ ಮೇಲೆ ಶುಕ್ರವಾರ ಮಧ್ಯಾಹ್ನ ಈ ಬಿರುಕು ಕಂಡುಬಂದಿದೆ.
ಸುದ್ದಿ ತಿಳಿದ ಕೆಬಿಜೆಎನ್ಎಲ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. 10 ಸಾವಿರ ಕ್ಯುಸೆಕ್ ನೀರು ಹರಿಯುವ ಸಾಮರ್ಥ್ಯ ಹೊಂದಿದ ಮುಖ್ಯ ಕಾಲುವೆ ಪ್ರತಿ ಬಾರಿ ನೀರು ಹರಿಸಿದಾಗ ಕೆಲವಡೆ ಒಡೆದು ಅಪಾರ ನಷ್ಟವಾಗುತ್ತಿತ್ತು. ಇದನ್ನು ಗಮನಸಿದ ಸರ್ಕಾರ ಕಾಲುವೆ ನವೀಕರಣಕ್ಕೆ ಮುಂದಾಗಿತ್ತು. ಕಳೆದ ವರ್ಷ 220 ಕೋಟಿ ಅನುದಾನ ಒದಗಿಸಿದ್ದರಿಂದ 25 ಕಿ.ಮೀ. ಮಾತ್ರ ನವೀಕರಣಗೊಳಿಸಲಾಯಿತು.
ಅನುದಾನಕ್ಕಾಗಿ ಕಾಯುತ್ತಿರುವುದು: ಇನ್ನುಳಿದ ಕಾಲುವೆಯ ನವೀಕರಣ ಕಾಮಗಾರಿಗೆ ಸುಮಾರು 420 ಕೋಟಿ ಅಗತ್ಯವಿದ್ದು, ಅನುದಾನಕ್ಕಾಗಿ ಕೇಂದ್ರ ಸರ್ಕಾರದ ಮಂಜೂರಾತಿಗೆ ಕಾಯಲಾಗುತ್ತಿದೆ. ಆದರೆ ಬೇಸಿಗೆಯಲ್ಲಿ ಹಣ ಬಿಡುಗಡೆಯಾಗದೇ ಉಳಿದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇನ್ನೇನು ಆಲಮಟ್ಟಿ ಜಲಾಶಯ ಭರ್ತಿಯಾಗುತ್ತಿದ್ದು, ನೀರಾವರಿ ಸಲಹಾ ಸಮಿತಿ ಸಭೆ ಜರುಗಿ ಒಂದೆರಡು ವಾರದಲ್ಲಿ ನೀರು ಹರಿಸಲು ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.
ಅಷ್ಟರಲ್ಲಿ 60ನೇ ಕಿ.ಮೀ. ಹತ್ತಿರ ಕಾಲುವೆ ಕುಸಿತ ಕಂಡುಬಂದಿರುವುದು ರೈತರಲ್ಲಿ ಆತಂಕ ಹುಟ್ಟಿಸಿದೆ. ಹುಣಸಗಿ ಸಮೀಪದ 40ನೇ ಕಿ.ಮೀ.ನಿಂದ 78ನೇ ಕಿ.ಮೀ.ರವರೆಗೆ ಒಟ್ಟು 25 ಕಿ.ಮೀ. ಮುಖ್ಯ ಕಾಲುವೆಯನ್ನು ಕಳೆದ ಸಾಲಿನಲ್ಲಿ ನವೀಕರಣ ಮಾಡಲಾಗಿದೆ.
ಆದರೆ 55ರಿಂದ 60ನೇ ಕಿ.ಮೀ., 69ರಿಂದ 77 ಕಿ.ಮೀ.ವರೆಗೆ ನವೀಕರಣ ಕಾಮಗಾರಿ ನಡೆಯಬೇಕಿದೆ. ಹುಣಸಗಿ ವಿಭಾಗದ 37 ಕಿ.ಮೀ. ಪೈಕಿ 25 ಕಿ.ಮೀ. ಕಾಲುವೆ ಮಾತ್ರ ನವೀಕರಣ ಮಾಡಲಾಗಿದ್ದು, ಅದರಲ್ಲಿ ಇನ್ನೂ 11 ಕಿ.ಮೀ. ಮುಖ್ಯ ಕಾಲುವೆ ನವೀಕರಣ ಕಾಮಗಾರಿ ಬಾಕಿ ಇದೆ.
ಸುದ್ದಿ ಮಾಡುವ ಅಗ್ನಿ: ಅಗ್ನಿ ಗ್ರಾಮದ ಹತ್ತಿರ ಹಾದುಹೋಗುವ 56 ಕಿ.ಮೀ.ನಿಂದ 60 ಕಿ.ಮೀ. ನಾರಾಯಣಪುರ ಎಡದಂಡೆ ನಾಲೆಯು ಬೆಟ್ಟ ಸುತ್ತುವರಿದು ಹೋಗುತ್ತದೆ. ಕಾಲುವೆಗೆ ಅಡ್ಡಲಾಗಿರುವ ಗುಡ್ಡದಿಂದ ಪ್ರತಿ ವರ್ಷ ಕುಸಿತ ಪ್ರಕರಣಗಳು, ನಾಲೆಗೆ ಬಳಸಿರುವ ಸಡಿಲ ಮಣ್ಣಿನಿಂದ ಕಾಲುವೆ ಕುಸಿಯುವ ಭೀತಿಯಿಂದ ಕೆಳಗಿನ ಗ್ರಾಮಗಳ ರೈತರಲ್ಲಿ ಸದಾ ಆತಂಕದಲ್ಲಿರುತ್ತಾರೆ. ಅದಕ್ಕಾಗಿ ಶಾಶ್ವತ ಪರಿಹಾರಕ್ಕಾಗಿ ಗುಡ್ಡವನ್ನು ಕತ್ತರಿಸಿ ಸುರಂಗ ಮಾರ್ಗದ ಮೂಲಕವಾಗಲಿ ಅಥವಾ ಅತಿ ಆಳದ ಕಾಲುವೆ ನಿರ್ಮಾಣ ಮಾಡಿ ಅದರ ಮೇಲೆ ಆರ್ಸಿಸಿ ಮಾಡಬೇಕು ಎಂದು ನೀರಾವರಿ ತಜ್ಞರು ವರದಿಯಲ್ಲಿ ಸಲಹೆ ಮಾಡಿದ್ದರು.
ಆದರೆ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ವರದಿಯನ್ನು ಗಂಭೀರವಾಗಿ ಪರಿಗಣಿಸದೆ ಅಲಕ್ಷಿಸಲಾಗುತ್ತಿದೆ ಎಂಬುದು ಈ ಭಾಗದ ರೈತರ ಆರೋಪವಾಗಿದೆ. 55 ಕಿ.ಮೀ.ನಿಂದ 60 ಕಿ.ಮೀ.ವರಗೆ ಕಾಲುವೆ ನಿರ್ಮಾಣ ವೆಚ್ಚ, ನಿಗಮಕ್ಕೆ ಹೆಚ್ಚು ಹೊರೆ ಎಂಬ ಕಾರಣದಿಂದ ನವೀಕರಣ ಅವಧಿಯಲ್ಲಿ ಈ ಐದು ಕಿ.ಮೀ. ವ್ಯಾಪ್ತಿಯನ್ನು ನವೀಕರಿಸದೇ ಬಿಡಲಾಗಿದೆ.
ಈ ಹಿಂದೆ ಇದೆ ರೀತಿ ಕಾಲುವೆ ಬಿರುಕು ಬಿಟ್ಟಾಗ ಅದಕ್ಕೆ ಲಕ್ಷಾಂತರ ರು. ಖರ್ಚು ಮಾಡಲಾಗಿತ್ತು. ಈಗ ಮತ್ತೆ ಅದೇ ಪರಿಸ್ಥಿತಿ ತಲೆದೋರಿದೆ.
ಅಧಿಕಾರಿಗಳ ಭೇಟಿ: ಬಿರುಕು ಬಿಟ್ಟ ಸ್ಥಳಕ್ಕೆ ನಾರಾಯಣಪುರ ಅಧೀಕ್ಷಕ ಎಸ್. ಭೋಜಾನಾಯಕ, ಕಾರ್ಯಪಾಲಕ ಅಭಿಯಂತರ ಲೋಕೇಶಪ್ಪ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹಬಿಬುರ್ ರೆಹಮಾನ್, ಎಂಜನಿಯರ್ ರವಿಕುಮಾರ ಭೇಟಿ ನೀಡಿ ಪರೀಶೀಲಿಸಿದ್ದಾರೆ. ಅಲ್ಲದೆ ತಾತ್ಕಾಲಿಕ ದುರಸ್ತಿಗಾಗಿ ಅಂದಾಜು ಪಟ್ಟಿ ಸಿದ್ಧಪಡಿಸಿ ಹಿರಿಯ ಅಧಿಕಾರಿಗಳ ಅನುಮೋದನೆಗೆ ಕಳುಹಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ನೀರು ಹರಿಸುವಲ್ಲಿ ಯಾವುದೇ ಅಡಚಣೆ ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ನಾರಾಯಣಪುರ ಜಲಾಶಯ ನಾಲ್ಕು ಜಿಲ್ಲೆಗಳ ಲಕ್ಷಾಂತರ ರೈತರ ಜೀವನಾಡಿಯಾಗಿದೆ. ಅದಕ್ಕಾಗಿ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು ಈ ವಿಷಯದಲ್ಲಿ ರಾಜಕೀಯ ಮಾಡದೆ ಶಾಶ್ವತ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕಿ ಮುಂದೆ ನಡೆಯುವ ದುರಂತಗಳನ್ನು ತಡೆಯಬೇಕು. ಆ ನಿಟ್ಟಿನತ್ತ ಕೆಲಸ ಮಾಡುವರೇ ಎಂಬುದನ್ನು ಕಾದುನೋಡಬೇಕಿದೆ.