ರಾಜಕೀಯ ಪ್ರಭಾವಕ್ಕೆ ಬಗ್ಗಲ್ಲ, ಕಾನೂನು ಮೀರಲ್ಲ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜು.6
ಗುಲ್ಬರ್ಗ ಜಿಲ್ಲೆಯಲ್ಲಿ ತಾವು ಇರುವಷ್ಟು ಅವಧಿ ಯಾವುದೇ ರಾಜಕೀಯ ಪ್ರಭಾವಕ್ಕೂ ಜಗ್ಗದೆ, ಬಗ್ಗದೆ ಕಾನೂನು ಚೌಕಟ್ಟಿನಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡಬೇಕೋ ಅವುಗಳನ್ನು ಯಾವುದೇ ವಶೀಲಿ ಬಾಜಿ- ಪ್ರಭಾವಗಳ ಅಂಜಿಕೆ ಇಲ್ಲದಂತೆ ಮಾಡುವುದಾಗಿ ಹೇಳಿರುವ ಗುಲ್ಬರ್ಗ ನೂತನ ಎಸ್ಪಿ ಅಮಿತ್ ಸಿಂಗ್ ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸಿಂಗ್ಗೆ ತಾವು ಆದ್ಯತೆ ನೀಡುವುದಾಗಿ ಘೋಷಿಸಿದ್ದಾರೆ.
ಸೌಜನ್ಯದಿಂದ ವರ್ತಿಸಿ: ಅಧಿಕಾರ ವಹಿಸಿಕೊಂಡ ನಂತರ ಶನಿವಾರ ಇಲ್ಲಿನ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೊಂದು- ಬೆಂದು ಜನತೆ ಠಾಣೆ ಮೆಟ್ಟಿಲು ಹತ್ತಿರುತ್ತಾರೆ. ಅಂತಹವರಿಗೆ ಗದರುವ- ಬೆದರಿಸುವ ಕೆಲಸವನ್ನು ಪೊಲೀಸರು ಮಾಡಬಾರದು. ಠಾಣೆಗ ಬರುವವರೊಂದಿಗೆ ಸಭ್ಯವಾಗಿ ವರ್ತಿಸಿ, ಅವರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುವ ಕೆಲಸ ಮಾಡಬೇಕು. ಇಂತಹ ಜನಸ್ನೇಹಿ ಪೊಲೀಸಿಂಗ್ಗೆ ತಾವು ಇಲ್ಲಿರುವಷ್ಟು ದಿನ ಆದ್ಯತೆ ನೀಡುವುದಾಗಿ ಹೇಳಿದರು.
ಹಗಲು ಕಳವಿನ ಪ್ರಕರಣ, ಸರಗಳ್ಳತನಗಳು ಗುಲ್ಬರ್ಗದಲ್ಲಿ ಸಾಕಷ್ಟು ನಡೆಯುತ್ತಿರುವುದು ತಾವು ಇಲ್ಲಿಗೆ ಬಂದ ತಕ್ಷಣವೇ ದಾಖಲೆಗಳ ಮೇಲೆ ಕಣ್ಣು ಹಾಯಿಸಿದಾಗ ಗಮನಕ್ಕೆ ಬಂದ ಸಂಗತಿ. ಬರುವ ದಿನಗಳಲ್ಲಿ ಇವೆರಡೂ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವ ಕೆಲಸಕ್ಕೆ ತಾವು ಆದ್ಯತೆ ನೀಡುವುದಾಗಿ ಹೇಳಿದರು.
ಕಂಕಣಬದ್ಧ: ಪ್ರತಿಭಟನೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಯಮ ರೂಪಿಸಲಾಗುತ್ತದೆ. ಕಾನೂನು- ಸುವ್ಯವಸ್ಥೆ ಸದಾಕಾಲ ಕಾಪಾಡಿಕೊಂಡು ಹೋಗಲು ಇಡೀ ಬಲವನ್ನು ಸಜ್ಜಾಗಿಡಲಾಗುತ್ತದೆ. ಸದಾಕಾಲ ಜಾಗ್ರತೆಯಿಂದ ಇದ್ದು ಜನರ ಸೇವೆಯ ಕೆಲಸಕ್ಕೆ ಕಂಕಣಬದ್ಧವಾಗುವಂತೆ ತಾವು ಪೊಲೀಸ್ ವ್ಯವಸ್ಥೆ ಅಣಿಗೊಳಿಸುವುದಾಗಿಯೂ ಅಮಿತ್ ಸಿಂಗ್ ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿ, ಜನಸ್ನೇಹಿ ಪೊಲೀಸಿಂಗ್ ತಮ್ಮ ಹೇಳಿಕೆಯಾಗಿ ಉಳಿಯದೆ, ಬರುವ ದಿನಗಳಲ್ಲಿ ಅಕ್ಷರಶಃ ಜಾರಿಗೊಳ್ಳುತ್ತದೆ. ಗುಲ್ಬರ್ಗ ಜನತೆ ತಮ್ಮ ಪ್ರಯತ್ನಗಳಿಗೆ ಕೈಜೋಡಿಸಬೇಕು. ಕೆಲ ದಿನಗಳ ಜಿಲ್ಲಾ ಅಧ್ಯಯನ ನಂತರ ತಾವು ಇಂತಹ ಜನಸ್ನೇಹಿ ಕೆಲಸಗಳಿಗೆ ಶ್ರೀಕಾರ ಹಾಕುವುದಾಗಿ ಹೇಳಿದ್ದಾರೆ. ಡಿಎಸ್ಪಿಗಳಾದ ತಿಮ್ಮಪ್ಪ, ಬಸಣ್ಣವರ್ ಹಾಜರಿದ್ದರು.