ಸುದ್ದಿ ಸಂಕ್ಷೇಪ
ಹಿರಿಯರ ಸಲಹೆ, ಮಾರ್ಗದರ್ಶನ ಸದಾ ಬೇಕು: ಶಾಸಕ
ಶಹಾಪುರ: ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಸೇವೆ ಮಾಡಿ ನಿವೃತ್ತರಾಗಿರುವ ಎಲ್ಲ ಹಿರಿಯರ ಸಲಹೆ, ಮಾರ್ಗದರ್ಶನ ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಅವಶ್ಯಕವಾಗಿದ್ದು, ನಿಮ್ಮೆಲ್ಲರ ಆಶೀರ್ವಾದ ಸದಾ ಕಾಲ ಇರಬೇಕೆಂದು ಶಾಸಕ ಗುರುಪಾಟೀಲ ಶಿರವಾಳ ಹೇಳಿದರು. ಪಟ್ಟಣದ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಯಾವುದೇ ಜಾತಿ, ಪಂಗಡ, ಪಕ್ಷವೆಂದು ತಾರತಮ್ಯ ಮಾಡದೇ ಇಡೀ ತಾಲೂಕಿನ ಎಲ್ಲ ಕ್ಷೇತ್ರಗಳ ಸಮಸ್ತ ಜನತೆಯ ಆಶೀರ್ವಾದ ಬಲದಿಂದಲೇ ಚುನಾಯಿತನಾಗಿದ್ದೇನೆ. ಸಾಮಾಜಿಕ ನ್ಯಾಯದಡಿ ಕೆಲಸ ನಿರ್ವಹಿಸಿ ಜನತೆಯ ಋಣ ತೀರಿಸುತ್ತೇನೆ. ಹಿರಿಯರ ಆಶೀರ್ವಾದ ಇರಲಿ ಎಂದರು.
ಮಾರ್ಗಗರ್ಶನ ನೀಡಿ: ಹಿರಿಯ ಧುರೀಣ ಭೀಮಯ್ಯಗೌಡ ಕಟ್ಟಿಮನಿ ಮಾತನಾಡಿ, ನಿವೃತ್ತ ನೌಕರರು ಸದಾಕಾಲ ಮಾರ್ಗದರ್ಶಕರಾಗಿ ಯುವ ನಾಯಕ ಗುರುಪಾಟೀಲರಿಗೆ ಶ್ರೀರಕ್ಷೆಯಾಗಬೇಕು ಎಂದು ಹೇಳಿದರು. ಬಸವರಾಜ ಶಿರಡ್ಡಿ ಮಾತನಾಡಿದರು. ನೌಕರರ ಸಂಘದ ಹಲವಾರು ಸಮಾಜಮುಖಿ ಕಾರ್ಯ ಮಾಡುತ್ತಾ ಮುನ್ನಡೆದಿದ್ದು, ನಿವೃತ್ತರ ಅವಶ್ಯಕತೆಯ ಬಗ್ಗೆ ಕಾಳಜಿ ವಹಿಸುತ್ತಿದೆ ಎಂದರು. ಪ್ರಮುಖರಾದ ಸೈಯದ್ ಚಾಂದಸಾಬ, ಆರ್.ಎಸ್. ಹಳಗೊಂಡ, ಜಗದೇವಪ್ಪ ಮಾಸ್ತರ, ಸಾಯಬಣ್ಣ, ಅಶ್ವಥನಾರಾಯಣ, ಶರಣಪ್ಪ ಬಳೂಂಡಗಿ. ಎಸ್.ಎ. ಚಟ್ಟಿ, ಶಿವಣ್ಣಾಮಳ್ಳಿ, ಕಲ್ಯಾಣರಾವ, ತಮ್ಮಣ್ಣ ಇತರರು ಇದ್ದರು. ಬಸವರಾಜ ಶಿರಡ್ಡಿ ಸ್ವಾಗತಿಸಿದರು. ಸಾಯಬಣ್ಣ ಪ್ರಾರ್ಥಿಸಿದರು. ನಾಗಪ್ಪ ಬುಕಿಸ್ಟಗಾರ ವಂದಿಸಿದರು.
ವೇತನ ಬಿಡುಗಡೆಗೆ ಶಿಕ್ಷಕರ ಒತ್ತಾಯ
ಯಾದಗಿರಿ: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಮಂತ್ರಾಲಯದ ವತಿಯಿಂದ ಸಮನ್ವಯ ಶಿಕ್ಷಣ ಪೂರ್ಣಾವಧಿ ವೇತನ ಶ್ರೇಣಿಯ ಸರ್ಕಾರಿ-ಅನುದಾನಿತ ಪ್ರೌಢಶಾಲೆಗಳಲ್ಲಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದವರಿಗೆ ಕೂಡಲೇ ವೇತನ ಪಾವತಿ ಮಾಡಬೇಕೆಂದು ಸೇವಾ ನಿರತ ಶಿಕ್ಷಕರು ಒತ್ತಾಯಿಸಿದ್ದಾರೆ. ಈ ಕುರಿತು ಶಿಕ್ಷಕರ ನಿಯೋಗ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರೇತರ ಸಂಸ್ಥೆಯಾದ ತಾಳಿಕೋಟಿ ಶಿವಯೋಗಿ ಸಂಗಮಾರ್ಯ ವಿದ್ಯಾಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಹುಣಸಿಗಿಯ ಮಡಿವಾಳೇಶ್ವರ ವಿದ್ಯಾವರ್ಧಕ ಸಂಘದ ಶಾಲೆಗಳಲ್ಲಿ ಕಳೆದ ವರ್ಷದಿಂದ ಕಾರ್ಯನಿರ್ವಹಿಸಿದ್ದೇವೆ. ಆದರೆ ವೇತನ ಮಾತ್ರ ನೀಡಿಲ್ಲ. ನಮಗೆ ಅವರು ನಿಗದಿಪಡಿಸಿದ 8,825- 16 ಸಾವಿರ ಇತರ ಭತ್ಯೆ ಒಳಗೊಂಡಿದ್ದವು. ನಮ್ಮ ವಿಶೇಷ ಶಿಕ್ಷಕ ತರಬೇತಿ ಮೂಲ ದಾಖಲಾತಿ ಪತ್ರಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ. ಅವುಗಳನ್ನು ಕೂಡ ನೀಡುತ್ತಿಲ್ಲ. ಕೂಡಲೇ ಜಿಲ್ಲಾದಿಕಾರಿಗಳು ಅವರ ಮೇಲ ಕ್ರಮ ಕೈಗೊಂಡು ವೇತನ ಹಾಗೂ ದಾಖಲಾತಿ ಪತ್ರಗಳನ್ನು ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.