ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

1 ಕೋಟಿ ವೆಚ್ಚದಲ್ಲಿ ಆರೋಗ್ಯ ಕೇಂದ್ರ ಆಧುನೀಕರಣ: ಕುಲಕರ್ಣಿ

Lingaraj Badiger
Updated On : 8 Jul 2013, 11:21 am

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಜು.7
ತಾಲೂಕಿನ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆಯನ್ನು ಶಾಸಕ ಡಾ. ಉಮೇಶ ಜಾಧವ ನಡೆಸಿದರು.
ತಾಲೂಕ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಗತಿ ಪರಿಶೀಲನೆ ನಡೆಸಿದರು.
ತಾಲೂಕ ಆರೋಗ್ಯಾಧಿಕಾರಿ ಡಾ. ರಾಜಕುಮಾರ ಕುಲಕರ್ಣಿ ಮಾತನಾಡಿ, ತಾಲೂಕಿನಲ್ಲಿ ರುದನೂರ ಮತ್ತು ಮೋಘಾ ಗ್ರಾಮಗಳಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಂಜೂರಿಯಾಗಿವೆ. ಕೋಡ್ಲಿ ಮತ್ತು ಐನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 1 ಕೋಟಿಯಲ್ಲಿ ಆಧುನೀಕರಣ ನಡೆಸಲಾಗುತ್ತಿದೆ ಎಂದರು.
ತಾಲೂಕಿನಲ್ಲಿ ವೈದ್ಯರ ಮತ್ತು ಸಿಬ್ಬಂದಿ ಹುದ್ದೆಗಳು ಖಾಲಿ ಇವೆ ಎಂದು ರಾಜಕುಮಾರ ಕುಲಕರ್ಣಿ ಸಭೆಯಲ್ಲಿ ಹೇಳಿದಾಗ ಯಾರು ಬೇರೆಡೆ ವರ್ಗವಣೆಗೊಂಡಿದ್ದವರನ್ನು ಪುನ ವಾಪಸ್ಸು ಬರುವಂತೆ ತಿಳಿಸಬೇಕೆಂದು ಶಾಸಕರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
13 ಸಾವಿರ ಹೆಕ್ಟೆರ್‌ನಲ್ಲಿ ವನ್ಯಜೀವಿ ಧಾಮ: ತಾಲೂಕು ವಲಯ ಅರಣ್ಯಾಧಿಕಾರಿ ಎಂ.ಎಲ್. ಭಾವಿಕಟ್ಟಿ ಮಾತನಾಡಿ, ತಾಲೂಕಿನ ಕುಂಚಾವರಂ ಅರಣ್ಯಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಒಟ್ಟು 22 ಸಾವಿರ ಹೆಕ್ಟರ್ ಅರಣ್ಯಪ್ರದೇಶವಿದೆ. ಇದರಲ್ಲಿ 13 ಸಾವಿರ ಹೆಕ್ಟರ್ ಅರಣ್ಯಪ್ರದೇಶದಲ್ಲಿ ವನ್ಯಜೀವಿ ಧಾಮ ಆಗಲಿದೆ. ಈಗಾಗಲೇ ಸರ್ಕಾರದಿಂದ ಆದೇಶ ಬಂದಿದೆ ಎಂದರು.
725 ಹೆಕ್ಟೆರ್ ಪ್ರದೇಶದಲ್ಲಿ ಅರಣ್ಯೀಕರಣಗೊಳಿಸಲಾಗುತ್ತಿದೆ ಎಂದಾಗ ಶಾಸಕ ಮಾತನಾಡಿ, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗೆ ಸಂಬಂಧಪಟ್ಟ ಜಮೀನು ಮಾಹಿತಿ ನೀಡಬೇಕು, ಇದರ ಬಗ್ಗೆ ತಹಸೀಲ್ದಾರೊಂದಿಗೆ ಜಂಟಿಯಾಗಿ ಸಮೀಕ್ಷೆ ನಡೆಸಬೇಕು ಎಂದರು.
ಶೇ.95 ರಷ್ಟು ಬಿತ್ತನೆ: ಕೃಷಿ ಅಧಿಕಾರಿ ಜಾನಕಿಬಾಯಿ ಬಳವಾಟ್ ಮಾತನಾಡಿ, ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಶೇ.95 ರಷ್ಟು ಬಿತ್ತನೆಯಾಗಿದೆ. ಒಟ್ಟು ಜನವರಿ ತಿಂಗಳಿಂದ ಜೂನ್ ಅಂತ್ಯದವರೆಗೆ 231 ಮಿಮಿ ಮಳೆಯಾಗಿದೆ ಎಂದರು.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುರೇಶ ಬಬಲಾದ ಮಾತನಾಡಿ, ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣಕ್ಕಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ವತಿಯಿಂದ 39 ಕೋಟಿ ಮಂಜೂರಿಯಾಗಿದೆ ಎಂದಾಗ ಪಟ್ಟಣದಲ್ಲಿ ಹಲವು ವರ್ಷಗಳಿಂದ ಸ್ಟ್ರೀಟ್ ಲೈಟುಗಳು ಹಾಕಲಾಗಿದೆ ಅವು ಇದುವರೆಗೆ 3 ವರ್ಷಗಳಿಂದ ಬೆಳಕು ಹರಿಸಿಲ್ಲ ಎಂದು ಶಾಸಕರು ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವರ್ಗಾವಣೆ ತಡೆಯಲು ಸೂಚನೆ: ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತರಾವ ನಾಟೀಕಾರ್ ಮಾತನಾಡಿ, ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 1ರಿಂದ 10ನೇ ತರಗತಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರಗಳನ್ನು ನೀಡಲಾಗಿದೆ ಎಂದರು.
ತಾಲೂಕಿನಲ್ಲಿ 400 ಶಿಕ್ಷಕರ ಕೊರತೆ ಇದೆ ಎಂದು ಸಭೆಯಲ್ಲಿ ವಿವರಿಸುತ್ತಿದ್ದಾಗ ಹಿಂದುಳಿದ ತಾಲೂಕಿನಲ್ಲಿ ಶಿಕ್ಷಣ ಪ್ರಗತಿಯಾಗಬೇಕು ಯಾವುದೇ ಶಿಕ್ಷಕರು ಬೇರೆಡೆ ವರ್ಗಾವಣೆಗೊಂಡಿದ್ದರು ರಿಲೀವರ್ ಬರುವವರೆಗೆ ವರ್ಗಾವಣೆ ತಡೆಹಿಡಿಯಬೇಕೆಂದು ಬಿಇಓಗೆ ಶಾಸಕ ಡಾ. ಉಮೇಶ ಜಾಧವ ಸೂಚನೆ ನೀಡಿದರು.
ಸಭೆಯಲ್ಲಿ ಲೋಕೋಪಯೋಗಿ, ಜಲಾನಯನ ಅಭಿವೃದ್ಧಿಇಲಾಖೆ, ರೇಷ್ಮೆ, ಸಣ್ಣ ನೀರಾವರಿ, ಸಮಾಜ ಕಲ್ಯಾಣ, ಚಂದ್ರಂಪಳ್ಳಿ ಮತ್ತು ಮುಲ್ಲಾಮಾರಿ ನೀರಾವರಿ ಯೋಜನೆ, ಜೆಸ್ಕಾಂ, ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್, ತಾಪಂ, ಬಿಸಿಎಂ ಸೇರಿದಂತೆ ಇನ್ನೀತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ತಹಸೀಲ್ದಾರ್ ಮೋಹನ ಜೋಶಿ, ಜಗನ್ನಾಥರೆಡ್ಡಿ, ಎಇಇ ರೇವಣಸಿದ್ದಪ್ಪ ಹಾಗರಗಿ, ಪರಮೇಶ್ವರ ಬಿರಾದಾರ,  ರಾಜಶೇಖರ ಗಾರಂಪಳ್ಳಿ, ವಿಜಯಕುಮಾರ್ ಬೆಡಸೂರ, ವಿಜಯಕುಮಾರ್ ಪುಲಾರೆ, ಅರಣ್ಯಾಧಿಕಾರಿ ಎಂ.ಎಲ್. ಭಾವಿಕಟ್ಟಿ, ಕೃಷಿ, ಸುರೇಶ ಮೇದಾ, ಶಾಹೀದ್ ಅಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement