ಗೋವಾ 1000ಗೆ ಭಾರೀ ಡಿಮ್ಯಾಂಡ್...
ಕನ್ನಡಪ್ರಭ ವಾರ್ತೆ, ಆಳಂದ, ಜು.7
ರಾಜ್ಯದಲ್ಲಿ ಗುಟ್ಕಾ ನಿಷೇಧವಾಗಿದ್ದರೂ ಜಿಲ್ಲೆಯ ಗಡಿಭಾಗದಲ್ಲಿ ಅದರ ಪರಿಣಾಮ ಯಾವುದೇ ರೀತಿಯಲ್ಲಿ ಆಗಿಲ್ಲ. ಗುಟ್ಕಾ ನಿಷೇಧವಾದರೇನಂತೆ, ಅದರ ಹೆಸರಿನಲ್ಲಿ ಪಾನ್ ಮಸಾಲಾ, ಸುಪಾರಿ ಮಿಕ್ಸ್ ಎಂಬ ಹೆಸರಿನಲ್ಲಿ ಗುಟ್ಕಾ ಮಾರಾಟದ ಹೊಸ ಹೊಸ ಉತ್ಪಾದನೆಗಳು ಮಾರುಕಟ್ಟೆಗೆ ಒಮ್ಮೆಲೆ ಬಿಡುಗಡೆಗೊಂಡಿದ್ದರಿಂದ ಗುಟ್ಕಾ ಪ್ರಿಯರು ಆ ಪ್ಯಾಕೇಟ್ಗಳಿಗೆ ಮೊರಹೋಗುತ್ತಿದ್ದಾರೆ. ಇದರಿಂದ ಹೊಸ, ಹೊಸ ಉತ್ಪಾದನೆಗಳಿಗೆ ಭಾರೀ ಡಿಮ್ಯಾಂಡ್ ಬರುತ್ತಿದೆ.
ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ: ರಾಜ್ಯ ಸರ್ಕಾರವು ಗುಟ್ಕಾ ಹೊಂದಿದ 15 ಮೌಲ್ಯದ ಮಾಣಿಕ್ಚಂದ್, 15 ಮೌಲ್ಯದ ಬಾಬಾ, 3 ಮೌಲ್ಯದ ಗೋವಾ, 2 ಮೌಲ್ಯದ ಆರ್ಆರ್, 3ರ ಮಾಲಿನಿ, 2ರ ಟೀಚರ್ ಗುಟ್ಕಾ ಪ್ಯಾಕೇಟ್ಗಳನ್ನು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಿಷೇಧಿಸಿತ್ತು. ಅದರಂತೆ ಗಡಿಭಾಗದಲ್ಲಿ ತಹಸಿಲ್ದಾರರು, ಜಿಲ್ಲಾಧಿಕಾರಿಗಳು, ಪುರಸಭೆ, ಪಟ್ಟಣ ಪಂಚಾಯತಿ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿ ಗುಟ್ಕಾ ಪ್ಯಾಕೇಟ್ಗಳನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಸಿದರು.
ಹೊಸದಾಗಿ ಎಂಟ್ರಿ: ಮೊದಲು ಕದ್ದು ಮುಚ್ಚಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು, ಈಗ ಗುಟ್ಕಾ ಹೆಸರಿನಲ್ಲಿ ಪಾನ್ ಮಸಾಲಾ ಮತ್ತು ಸುಪಾರಿ ಮಿಕ್ಸ್ ಚೀಟಿಕೆಗಳು ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಟ್ಟಿದ್ದರಿಂದ ಅವುಗಳನ್ನು ಗುಟ್ಕಾ ಪ್ರಿಯರು ಹಿಂದೆ, ಮುಂದೆ ನೋಡದೇ ಖರೀದಿಸಿ, ತಮ್ಮ ಗುಟ್ಕಾ ತಿನ್ನುವ ಹಪಾಹಪಿಯ ಚಟವನ್ನು ತೀರಿಸಿಕೊಳ್ಳಲಾರಂಭಿಸಿದ್ದಾರೆ. ಗುಟ್ಕಾ ನಿಷೇಧದ ನಂತರ ಹೊಸದಾಗಿ 2 ಮೌಲ್ಯದ ಬಾಬಾ ಪಾನ್ ಮಸಾಲಾ, ಗೋವಾ ಸುಪಾರಿ ಮಿಕ್ಸ್, ರಾಯಲ್ 220, ಕೇವಲ 1 ಮೌಲ್ಯದ ಗೋವಾ 1000 ಮುಂತಾದ ಉತ್ಪಾದನೆಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿವೆ.
ತನಿಖೆ: ಪಾನ್ ಮಸಾಲಾ ಹೆಸರಿನಲ್ಲಿ ಗುಟ್ಕಾ ಮಾರಾಟದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ತಿಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಘೋಷಿಸಿದ್ದಾರೆ. ಆದರೂ ಪಾನ್ ಮಸಾಲಾ, ಸುಪಾರಿ ಮಿಕ್ಸ್ ಹೆಸರಿನಲ್ಲಿ ಪರೋಕ್ಷವಾಗಿ ಹಾಗೂ ಕದ್ದು, ಮುಚ್ಚಿ ಚೀಟಿಯಲ್ಲಿ ತಂಬಾಕು, ಜರ್ದಾ ಹಾಕಿ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ತಡೆಯುವುದು ಅಧಿಕಾರಿಗಳಿಗೆ ಮಾತ್ರ ತಲೆನೋವಾಗಲಿದೆ.