ಜಿಲ್ಲೆಯ ಜ್ವಲಂತ ಸಮಸ್ಯೆ: ಶೀಘ್ರದಲ್ಲೇ ನಿಯೋಗ
ಕನ್ನಡಪ್ರಭ ವಾರ್ತೆ, ಯಾದಗಿರಿ, ಜು.7
ಜಿಲ್ಲಾ ಕೇಂದ್ರವಾಗಿ ನಾಲ್ಕು ವರ್ಷವಾಗುತ್ತ ಬಂದರೂ ಯಾದಗಿರಿ ಇದುವರೆಗೆ ಮೂಲ ಸೌಲಭ್ಯಗಳಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಆದ್ದರಿಂದ ಕರವೇ ನೇತೃತ್ವದಲ್ಲಿ ನಿಯೋಗದಲ್ಲಿ ಬೆಂಗಳೂರಿಗೆ ತೆರಳಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿಯಾಗಿ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ತಿಳಿಸಿದರು.
ಇಲ್ಲಿಯ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈದರಾಬಾದ್ ಕರ್ನಾಟಕದಲ್ಲಿ ವಿಶೇಷವಾಗಿ ಯಾದಗಿರಿ ನೂತನ ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆ ಪರಿಹರಿಸಲು ಆದ್ಯತೆ ನೀಡಬೇಕು. ಸರ್ಕಾರಿ ಕಚೇರಿಗಳು ದೂರದಲ್ಲಿದ್ದು, ಅವುಗಳನ್ನು ಒಂದೇ ಕಡೆ ತರಲು ಮಿನಿ ವಿಧಾನಸೌಧವನ್ನು ಶೀಘ್ರದಲ್ಲಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ರಸ್ತೆ, ನೀರು, ಸ್ವಚ್ಛತೆಗಾಗಿ ಮನವಿ: ಜಿಲ್ಲೆಯಲ್ಲಿ ಖಾಲಿಯಿರುವ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡಬೇಕು. ನಗರಗಳಲ್ಲಿನ ರಸ್ತೆ ಅಗಲೀಕರಣ ಮಾಡಿ ನಗರ ಸೌಂದರ್ಯೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ನಗರ ಹಾಗೂ ಗ್ರಾಮೀಣ ಭಾಗದ ರಸ್ತೆ ಸುಧಾರಣೆ ಮಾಡಬೇಕು. ಶುದ್ಧ ಕುಡಿವ ನೀರು, ಶೌಚಾಲಯ ಸೇರಿದಂತೆ ಮೂಲ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಸಚಿವರಿಗೆ ಮನವಿ ನೀಡಲಾಗುವುದು ಎಂದು ತಿಳಿಸಿದರು.
ಕೊನೆ ಭಾಗದ ರೈತರಿಗೆ ಕಾಲುವೆ ನೀರು ಸಿಗದೇ ತೊಂದರೆ ಅನುಭವಿಸುವಂತಾಗಿದ್ದು, ಕಾಲುವೆ ದುರಸ್ತಿಗೊಳಿಸಿ ರೈತರಿಗೆ ನೀರು ದೊರೆಯುವಂತೆ ಮಾಡಬೇಕು. ಐತಿಹಾಸಿಕ ಕೋಟೆ, ಅತಿಕ್ರಮಿತ ಉದ್ಯಾನಗಳ ರಕ್ಷಣೆ ಮಾಡಬೇಕು. ಅಲ್ಲದೇ ಕೆರೆಗಳ ಅಭಿವೃದ್ಧಿಗೊಳಿಸಬೇಕು. ವಡಗೇರಾ ಹಾಗೂ ಹುಣಸಗಿ ತಾಲೂಕೆಂದು ಘೋಷಣೆಯಾಗಿದ್ದು, ಕೆಂಭಾವಿ ಹಾಗೂ ಕಕ್ಕೇರಾ ತಾಲೂಕು ರಚನೆ ಮಾಡಬೇಕು.
ಕೈಗಾರಿಕೆ, ರೈಲು, ಶೈಕ್ಷಣಿಕ ಸೌಲಭ್ಯ ಅಗತ್ಯ: ಕೈಗಾರಿಕೆಗಳನ್ನು ಸ್ಥಾಪಿಸಿ ಜಿಲ್ಲೆಯ ನಿರುದ್ಯೋಗ ನಿವಾರಣೆಗೆ ಶ್ರಮಿಸಬೇಕು. ಎಂಜಿನಿಯರಿಂಗ್, ಮೆಡಿಕಲ್ ಇನ್ನಿತರ ಉನ್ನತ ಶಿಕ್ಷಣ ಕಾಲೇಜುಗಳನ್ನು ಪ್ರಾರಂಭಿಸಿ ಶೈಕ್ಷಣಿಕ ಅಭಿವೃದ್ಧಿಗೊಳಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ರಂಗಮಂದಿರ, ಕನ್ನಡ ಭವನ ನಿರ್ಮಾಣ ಮಾಡಬೇಕು. ಜಿಲ್ಲೆಯಲ್ಲಿ ಎಲ್ಲ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಹಾಗೂ ಹೊಸ ರೈಲು ಮಾರ್ಗಗಳ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗುವುದು.
25 ಜನರ ನಿಯೋಗ: 25 ಜನರು ನಿಯೋಗದಲ್ಲಿ ತೆರಳುತ್ತಿದ್ದು, ಎಲ್ಲ ಸಚಿವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಜಿಲ್ಲೆಯ ಸಮಸ್ಯೆಗಳನ್ನು ತಿಳಿಸಿ ಬೇಡಿಕೆ ಈಡೇರಿಸುವಂತೆ ಮನವಿ ಮಾಡಲಾಗುವುದು ಎಂದು ಶರಣು ಗದ್ದುಗೆ ತಿಳಿಸಿದರು.
ಕರವೇ ಪದಾಧಿಕಾರಿಗಳಾದ ಶರಣು ಇಟಗಿ, ದೇವು ಪಾಟೀಲ, ನಿಂಗರಾಜು, ವೆಂಕಟೇಶ ಬೋನೇರ, ಗೌಡಪ್ಪ ಕೋರಿ, ವಿಶಾಲ ಕಲ್ಲೂರ ಇತರರು ಇದ್ದರು.