ತ್ಯಾಜ್ಯ ವಿಲೇವಾರಿಗೆ ಪ್ರಿಯಾಂಕ್ ಒತ್ತಾಯ
ಗುಲ್ಬರ್ಗ: ಗುಲ್ಬರ್ಗ ತಾಲೂಕಿನ ಉದನೂರ ಗ್ರಾಮದ ಬಳಿ ಗುಲ್ಬರ್ಗ ನಗರದಲ್ಲಿನ ಎಲ್ಲ ಕಸಗಳನ್ನು ವಿಲೇವಾರಿ ಮಾಡಲಾಗುತ್ತಿದ್ದು, ಈ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಣೆ ಮಾಡದ ಕಾರಣ ಗ್ರಾಮದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪಾಲಿಕೆ ಕೂಡಲೇ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕೆಂದು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಉದನೂರ ಗ್ರಾಮದ ಬಳಿ ವಿಲೇವಾರಿಯಾಗುತ್ತಿರುವ ತ್ಯಾಜ್ಯ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ, ನಗರದ ತ್ಯಾಜ್ಯವನ್ನು ಸರಿಯಾದ ಕ್ರಮದಲ್ಲಿ ಸಂಸ್ಕರಿಸಿ ಈ ಕಸದಿಂದ ಗೊಬ್ಬರ ಇತ್ಯಾದಿ ತಯಾರಿ ಮಾಡಲು ಅಗತ್ಯ ಕ್ರಮ ಕೈಗೊಂಡರೆ ಅದರಿಂದ ಜನರಿಗೂ ಲಾಭದಾಯಕವಾಗಲಿದೆ ಎಂದು ಪಾಲಿಕೆ ಆಯುಕ್ತ ರವೀಂದ್ರ ಅವರಿಗೆ ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಅನಿತಾ ಪವನಕುಮಾರ ವಳಕೇರಿ, ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪವನಕುಮಾರ ವಳಕೇರಿ ಇತರರು ಉಪಸ್ಥಿತರಿದ್ದರು.