ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭಾಗ್ಯಲಕ್ಷ್ಮೀ, ಮಾಸಾಶನ, ರೇಷನ್ ಕಾರ್ಡ್ ಸಮಸ್ಯೆ

Lingaraj Badiger
Updated On : 8 Jul 2013, 11:22 am

ಕನ್ನಡಪ್ರಭ ವಾರ್ತೆ, ಆಳಂದ, ಜು.7
ನಿರುಗುಡಿ ಗ್ರಾಮ ಪಂಚಾಯ್ತಿಯಲ್ಲಿ ಶನಿವಾರ ಖಜೂರಿ ಹೋಬಳಿ ಮಟ್ಟದ ಜನಸ್ಪಂದನ ಸಭೆಯನ್ನು ಶಾಸಕ ಬಿ.ಆರ್. ಪಾಟೀಲ್ ಅವರ ಸಮ್ಮುಖದಲ್ಲಿ ನಡೆಸಲಾಯಿತು.
ಗ್ರಾಪಂ ಶೇ.18ರಷ್ಟು ಬಜೆಟ್‌ನಲ್ಲಿ ಶೈಕ್ಷಣಿಕ ಸಾಲಕ್ಕೆ ಅರ್ಜಿ ಸಲ್ಲಿಸಿದರೂ ಹಣ ನೀಡಿಲ್ಲ. ನನ್ನ ಹೆಸರಿನಲ್ಲಿ 25 ಸಾವಿರ ಎತ್ತಿ ಹಾಕಿದ್ದಾರೆ ಎಂದು ಪದವೀಧರ ದಶರಥ ದೂರಿದರು. ಚಂದ್ರಶ್ಯಾ ಬಿರಾದಾರ ಅವರು ನಿರುಗುಡಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಕಟ್ಟಡ ಒದಗಿಸುವಂತೆ ಮನವಿ ಮಾಡಿದರು.
ಗ್ರಂಥಾಲಯ ಇಲ್ಲದಿದ್ರೂ ವೇತನ: ಅಂಗನವಾಡಿಗೆ ಪೂರೈಕೆಯಾಗುವ ಆಹಾರ ಧಾನ್ಯ ದುರುಪಯೋಗಪಡಿಸುತ್ತಿದ್ದಾರೆ. ಸೂಕ್ತ ಸ್ಥಳದಲ್ಲಿಡದೆ ಬೇಕಾದವರ ಜಾಗದಲ್ಲಿಡುತ್ತಿದ್ದಾರೆ ಎಂದು ಅರ್ಜಿದಾರರೊಬ್ಬರು ದೂರಿದರು.
ಸಾರ್ವಜನಿಕ ಗ್ರಂಥಾಲಯ ಹೆಸರಿನಲ್ಲಿ ವೇತನ ಪಡೆಯಲಾಗುತ್ತಿದೆ. ಅದು ಎಲ್ಲಿದೆ ಎಂಬುದೇ ಗ್ರಾಮಸ್ಥರಿಗೆ ಗೊತ್ತಿಲ್ಲ. ತನಿಖೆ ನಡೆಸಿ ಗ್ರಂಥಾಲಯ ಒದಗಿಸಬೇಕು ಎಂದು ಶಶಿಕಾಂತ ಕಾಂಬಳೆ ಇತರರು ಸಭೆ ಗಮನಕ್ಕೆ ತಂದರು.
ಭಾಗ್ಯಲಕ್ಷ್ಮೀ ಬಾಂಡ್ ಪಡೆಯಲು ಅರ್ಜಿ ಸಲ್ಲಿಸಿದ ಮೇಲೆ ಅರ್ಜಿ ಸ್ವೀಕೃತಿ ನೀಡುತ್ತಿಲ್ಲ. ನಂತರ ಕೇಳಲು ಹೋದರೆ ಗೊತ್ತಿಲ್ಲ ಎಂದು ಓಡಾಡಿಸುತ್ತಿದ್ದಾರೆ. ಬಂದ ಬಾಂಡ್‌ಗಳು ವರ್ಷವಾದರೂ ವಿತರಿಸಿಲ್ಲ ಎಂದು ಪ್ರಭಾಕರ್ ಎಂಬವರು ಅಳಲು ತೋಡಿಕೊಂಡರು.
ಜೋಪಡಿ ಜೀವನ: ವೈದ್ಯರು, ಪಶು ವೈದ್ಯರ ಮತ್ತು ಕಟ್ಟಡ ಕೊರತೆಯಿದೆ ಒದಗಿಸಬೇಕು ಎಂದು ಗ್ರಾಮಸ್ಥರು ಸಭೆಗೆ ಹೇಳಿದರು. ಕಾರ್ಮಿಕ ಮಹಿಳೆ ಕಾವೇರಿ ಮಾತನಾಡಿ, 20 ವರ್ಷಗಳಿಂದ ನನಗೆ ಯಾವುದೇ ಸೌಲಭ್ಯವೂ ಕೊಟ್ಟಿಲ್ಲ. ಜೋಪಡಿಯಲ್ಲಿದ್ದೇವೆ. ಮನೆ ಕೊಡುವುದಾಗಿ ಹಣ ತೆಗೆದುಕೊಂಡು ಮನೆಕೊಟ್ಟಿಲ್ಲ. ಅಂತ್ಯೋದಯ ಕಾರ್ಡ್ ಬದಲು ಸಾದಾ ಕಾರ್ಡ್ ಕೊಟ್ಟಿದ್ದಾರೆ ಎಂದು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು.
ಕೆರೆ, ರಸ್ತೆ, ನೀರು, ಮನೆ, ವಿದ್ಯುತ್, ಶಾಲಾ ಕಟ್ಟಡ, ಮಾಸಾಶನ, ರೇಷನ್ ಕಾರ್ಡ್ ಹೀಗೆ ತೀರ್ಥ, ಮಟಕಿ, ನಿರುಗುಡಿ ಗ್ರಾಮದಿಂದ ಹಲವು ಬೇಡಿಕೆಯ ಅರ್ಜಿಗಳನ್ನು ಸಾರ್ವಜನಿಕರು, ಸಂಘ-ಸಂಸ್ಥೆಯ ಪದಾಧಿಕಾರಿಗಳು ಸಲ್ಲಿಸಿದರು.
ಅರ್ಜಿ ವಿಲೇವಾರಿ ಕೈಗೊಂಡ ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ಅವರು ಸಂಬಂಧಿತ ಅಧಿಕಾರಿಗಳಿಗೆ ಚರ್ಚಿಸಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.
ಇಒ ಅಬ್ದುಲ್ ಸಲಾಂ, ಆರೋಗ್ಯಾಧಿಕಾರಿ ಸುಚಿತ್ರಾ ಬಿಲಗುಂದಿ, ಆಹಾರ ನಿರೀಕ್ಷಕ ದತ್ತಾತ್ರೇಯ, ಸಹಾಯಕ ಕೃಷಿ ನಿರ್ದೇಶಕ ಶಶಾಂಕ ಶಹಾ ಇತರ ಅಧಿಕಾರಿಗಳು ವ್ಯಾಪ್ತಿಯ ಕಾರ್ಯಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಮಸ್ಯೆಗೆ ಸ್ಪಂದಿಸಿ: ಶಾಸಕ ಬಿ.ಆರ್. ಪಾಟೀಲ್ ಮಾತನಾಡಿ, ಜನಸ್ಪಂದನ ಸಭೆ ಕಾಟಾಚಾರಕ್ಕೆ ನಡೆಸದೆ, ನಿಜವಾಗಿಯೂ ಹಳ್ಳಿಗರ ಸಮಸ್ಯೆ ಮತ್ತು ಬೇಡಿಕೆಗಳಿಗೆ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಗ್ರಾಪಂ ಆಡಳಿತ ಮಂಡಳಿ ಸಮರ್ಪಕವಾಗಿ ವ್ಯಾಪ್ತಿಯ ಎಲ್ಲ ಕೆಲಸವನ್ನು ಮಾಡಿದರೆ ಜನರಿಗೆ ಅರ್ಜಿ ಸಲ್ಲಿಸುವ ಅಗತ್ಯವೇ ಬೀಳದು. ಎಲ್ಲ ಸದಸ್ಯರು ಕೂಡಿ ಸಮರ್ಪಕ ಮತ್ತು ಅಗತ್ಯವಾದ ಕ್ರಿಯಾಯೋಜನೆ ರೂಪಿಸಿ ಮಹಿಳಾ ಶೌಚಾಲಯಗಳಂಥ ಪ್ರಮುಖ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಮಳೆ ಕೈಕೊಟ್ಟು ಬೆಳೆ ಹಾಳಾಗುತ್ತಿದೆ. ಕೃಷಿ ಅಧಿಕಾರಿಗಳು ಸಮರ್ಪಕವಾಗಿ ಬೆಳೆ ವರದಿ ಸಲ್ಲಿಸಿ ರೈತರಿಗೆ ಬೆಳೆ ವಿಮೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಹೇಳಿದರು.
ಉಪ ತಹಸೀಲ್ದಾರ್ ಶಿವಕುಮಾರ್, ಗ್ರಾಪಂ ಅಧ್ಯಕ್ಷೆ ಚತುರಾಬಾಯಿ ವಾಡಿ, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ್, ವಿಠ್ಠಲ್ ಶಿಂಧೆ, ಗುರುಶರಣ ಪಾಟೀಲ್ ಕೊರಳ್ಳಿ, ಮೋಹನಗೌಡ ಪಾಟೀಲ್ ಇತರರು ಇದ್ದರು. ಶಿಕ್ಷಣ ಇಲಾಖೆ, ಸಿಡಿಪಿಒ, ಜಿಪಂ ಸೇರಿ ಕೆಲ ಅಧಿಕಾರಿ ಪರ ಸಿಬ್ಬಂದಿಯನ್ನು ಕಳುಸಿಕೊಟ್ಟಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement