ಸುರಪುರಕ್ಕೆ ನೀರು ಸ್ಥಗಿತ
ಕನ್ನಡಪ್ರಭ ವಾರ್ತೆ, ಸುರಪುರ, ಜು.7
ಕಳೆದ ಎರಡು ದಿನಗಳಿಂದ ಪಟ್ಟಣಕ್ಕೆ ನೀರು ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ತಾಲೂಕಿನ ಶೆಳ್ಳಗಿ ಬಳಿ ಕೃಷ್ಣಾ ನದಿ ಜಾಕ್‌ವೆಲ್ ಪ್ರದೇಶಕ್ಕೆ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ತಾಲೂಕಿನ ಶೆಳ್ಳಗಿ ಸಮೀಪದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ನೀರು ಸರಬರಾಜು ಮಾಡುವ ಜಾಕ್‌ವೆಲ್‌ಗೆ ಸಮರ್ಪಕವಾದ ನೀರು ಸರಬರಾಜು ಆಗುತ್ತಿಲ್ಲ. ಹೀಗಾಗಿ ಕಳೆದ ಎರಡು ದಿನಗಳಿಂದ ಪಟ್ಟಣಕ್ಕೆ ನೀರು ಸರಬರಾಜು ನಿಂತುಹೋಗಿದೆ.
ಶಾಸಕರ ಭೇಟಿ: ನದಿಯಲ್ಲಿ ನೀರಿಲ್ಲದ ಕಾರಣ ಶೆಳ್ಳಗಿ ಜಾಕ್‌ವೆಲ್ ಪಂಪ್‌ನ ಕೆಳಗೆ ನೀರು ಹರಿಯುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗದ ಕಾರಣ ಪಂಪ್ ಆಗುತ್ತಿಲ್ಲ. ಇದರಿಂದಾಗಿ ಪಂಪ್ ಮೋಟಾರ್ ಬಂದ್ ಮಾಡಿ ಸುರಪುರಕ್ಕೆ ಸರಬರಾಜನ್ನು ನಿಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಶನಿವಾರ ಶೆಳ್ಳಗಿ ಹತ್ತಿರದ ಕೃಷ್ಣಾ ನದಿಯ ಜಾಕ್‌ವೆಲ್‌ಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ನೀರಿಲ್ಲದಕ್ಕೆ ಸಮಸ್ಯೆ: ಕಳೆದೆರಡು ವರ್ಷಗಳಿಂದ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನದಿಯಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಜಾಕ್‌ವೆಲ್‌ಗೆ ನೀರು ತಲುಪುತ್ತಿಲ್ಲ. ಇಷ್ಟು ದಿನ 5 ಸಾವಿರ ಮರಳು ಚೀಲಗಳನ್ನು ಹಾಕಿ ನದಿ ನೀರನ್ನು ಜಾಕ್‌ವೆಲ್ ಕಡೆ ತಿರುಗಿಸಿ ನೀರು ಪೂರೈಸಲಾಗುತ್ತಿತ್ತು. ಆದರೆ ಈಗ ನದಿಯಲ್ಲಿ ನೀರೇ ಇಲ್ಲದ ಕಾರಣ ಪಂಪ್ ಆಪರೇಟ್ ಆಗುತ್ತಿಲ್ಲ ಎಂದು ಪುರಸಭೆ ಅಧಿಕಾರಿ ಶಿವುಕುಮಾರ ಸ್ವಾಮಿ ಹಿರೇಮಠ ಶಾಸಕರಿಗೆ ಮಾಹಿತಿ ನೀಡಿದರು.
ಹರಸಾಹಸ ಮಾಡಿಯಾದ್ರೂ ನೀರೊದಗಿಸಿ: ಪರಿಸ್ಥಿತಿ ಅವಲೋಕಿಸಿ ಮಾತನಾಡಿದ ಶಾಸಕ ರಾಜಾ ವೆಂಕಟಪ್ಪ ನಾಯಕ, ಪಟ್ಟಣದ ಜನತೆಗೆ ಯಾವುದೇ ಕಾರಣಕ್ಕೂ ನೀರಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ. ಹಣ ಖರ್ಚಾದರೂ ಪರವಾಗಿಲ್ಲ. ಹಿಟಾಚಿ ತರಿಸಿ ನೀರಿನ ಹರಿವು ಈ ಕಡೆ ತಿರುಗಿಸಿಕೊಳ್ಳಲು ಪ್ರಯತ್ನಿಸಿ. ಒಟ್ಟಾರೆ ಏನಾದರೂ ಮಾಡಿ ನಾಗರಿಕರಿಗೆ ನೀರು ಒದಗಿಸಬೇಕೆಂದು ಸೂಚಿಸಿದರು.
ನಂತರ ಕೆಬಿಜೆಎನ್ನೆಲ್ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ನದಿಯಲ್ಲಿ ನೀರಿಲ್ಲದ ಕಾರಣ ಸುರಪುರದಲ್ಲಿ ನೀರಿನ ಪರಿಸ್ಥಿತಿ ಚಿಂತಾಜನಕವಾಗಿದ್ದು ತಕ್ಷಣ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನೀರು ಹರಿಸಬೇಕೆಂದು ಸೂಚಿಸದ ಅವರು, ಈ ಕುರಿತು ಜಲ ಸಂಪನ್ಮೂಲ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಮಾಜಿ ಸಂಸದ ರಾಜಾ ರಂಗಂಪ್ಪನಾಯಕ, ತಾಪಂ ಮಾಜಿ ಅಧ್ಯಕ್ಷ ವಿಠ್ಠಲ್ ಯಾದವ್, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ ಹಿರೇಮಠ, ವ್ಯವಸ್ಥಾಪಕ ಯಲ್ಲಪ್ಪ ಡೋಣ್ಣಿಗೇರಾ, ದೇವಿಂದ್ರ ಹೆಗಡೆ, ಜೆಇ ಬಸವರಾಜ, ಪುರಸಭೆ ಸದಸ್ಯ ವೆಂಕಟೇಶ ಹೊಸ್ಮನಿ, ಮುಖಂಡರಾದ ಸೂಲಪ್ಪ ಕಮತಗಿ ಇತರರಿದ್ದರು.