ಗಂಡನ ಕಿರುಕುಳ; ಆತ್ಮಹತ್ಯೆ
ಗುಲ್ಬರ್ಗ: ಪತಿಯ ಕಿರುಕುಳ ತಾಳದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಲ್ಬರ್ಗ ತಾಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ಕಳೆದ ಶನಿವಾರ ನಡೆದಿದೆ.
ಬಂಗಾರಿ ಪೂಜಾರಿ ಎಂಬ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆ. ಪತಿ ಕಲ್ಯಾಣಿ ಸಣ್ಣಪುಟ್ಟ ಕಾರಣಗಳಿಗೆ ಜಗಳ ತೆಗೆದು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕಳೆದ ಶುಕ್ರವಾರ ರಾತ್ರಿ ಪತ್ನಿ ಕೋಣೆಗೆ ಬೇಗ ಬಾರದಿರುವುದಕ್ಕೆ ಹೊಡೆದಿದ್ದಾನೆ. ಇದೇ ಕಾರಣಕ್ಕಾಗಿ ಆಕೆ ಮನನೊಂದು ಶನಿವಾರ ರಾತ್ರಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಭಾನುವಾರ ಕೊನೆಯುಸಿರೆಳೆದಿದ್ದಾಳೆ. ಈ ಕುರಿತು ಮೃತಳ ತಂದೆ ಲಕ್ಷ್ಮಣ ಮಳಗಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.