ಪತ್ರಕರ್ತರೇ ಕವಿಗಳಾದಾಗ...
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.8
ಭವ್ಯ ಪರಂಪರೆಯ ನೆಲವೇಕೆ ಇಂದು ಭಣಗುಡುತ್ತಿದೆ ಎಂಬ ಪ್ರಶ್ನೆ ಒಂದೆಡೆಯಾದರೆ, ಹಿಂದುಳಿದ ನೆಲದ ಪಕ್ಷಪಾತ ಧೋರಣೆಗೆ ಪ್ರಕೃತಿಯೂ ಸಾಥ್ ನೀಡುತ್ತಿದೆ ಎಂಬ ಈ ನೆಲದ ಅಲಕ್ಷ್ಯತನವನ್ನು ಎತ್ತಿ ಹಿಡಿದ ಕವನ ಮತ್ತೊಂದು.
ಹೆಣ್ಣು ಭ್ರೂಣ ಹತ್ಯೆ, ರಾಜಕಾರಣಿಗಳ ಭರವಸೆ ಮಾತುಗಳನ್ನೆಲ್ಲ ಇನ್ನೆಷ್ಟು ದಿನ ನಂಬೋದು ಎಂದು ಕೆಲ ಕವಿಗಳು ಪ್ರಶ್ನಿಸಿದರೆ, ಇನ್ನೂ ಹಲವರು ತಮ್ಮ ಕವನಗಳಲ್ಲಿ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟರು. ಅನೇಕರು ಸುತ್ತಲಿನ ನಿತ್ಯ ಚಟುವಟುವಟಿಕೆಗಳಿಗೆ ಕಾವ್ಯದ ರೂಪ ನೀಡಿ, 'ಹೀಗಾದರೆ ಹೇಗೆ' ಎಂದು ಮನದಾಳದ ನೋವು- ಬೇಗುದಿಯನ್ನು ಹೊರ ಹಾಕಿದರು...
ಇಲ್ಲಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ವಿಶ್ವಜ್ಯೋತಿ ಪ್ರತಿಷ್ಠಾನ ಹಾಗೂ ಜೈಕರವೇ ಸಹಯೋಗದಲ್ಲಿ ನಡೆದ ವರದಿಗಾರರ ಕಾವ್ಯಧಾರೆ... ಪತ್ರಕರ್ತರಿಗಾಗಿಯೇ ಪ್ರತ್ಯೇಕವಾಗಿ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಪತ್ರಕರ್ತರೇ ಕವಿಯಾದರು. ತಮ್ಮ ನಿತ್ಯದ ಕೆಲಸ ಕಾರ್ಯಗಳಲ್ಲೇ ತಾವು ಕಂಡ, ಅನುಭವಿಸಿದ ಸಮಾಜ, ಜನ ಸಮೂಹದ ನೋವು- ನಲಿವನ್ನೆಲ್ಲ ಶಬ್ದಗಳಲ್ಲಿ ಸೆರೆ ಹಿಡಿಯುವ ಕಸರತ್ತು ಮಾಡಿದರು.
ಕವಿತೆಯಲ್ಲಿ ತಳಮಳ: ಅಷ್ಟೇ ಅಲ್ಲ, ತಮ್ಮ ಅನುಭವದ ಹಿನ್ನೆಲೆಯಲ್ಲಿ ಕವನ ಕಟ್ಟಿ ಸೇರಿದ್ದ ಸಭಿಕರೆಲ್ಲರೂ ತಲೆದೂಗುವಂತೆ ಓದಿ ಸೈ ಎನ್ನಿಸಿಕೊಳ್ಳುವಲ್ಲಿಯೂ ಯಶ ಕಂಡರು. ಈ ಅಪರೂಪದ ಕವಿಗೋಷ್ಠಿಗೆ ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ಗುಲ್ಬರ್ಗ ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕ ಎಂ.ಬಿ. ಪಾಟೀಲ್ ಸಾಕ್ಷಿಯಾದದ್ದು ವಿಶೇಷವಾಗಿತ್ತು.
ಡಾ. ಶಿವರಾಮ ಅಸುಂಡಿ, ಸಂಗಮನಾಥ ರೇವತಗಾಂವ್, ಹಣಮಂತರಾವ ಭೈರಾಮಡಗಿ, ಶರಣಯ್ಯ ಹಿರೇಮಠ, ರಮೇಶ ಇಂಜಳ್ಳಿಕರ್, ಶರಣಬಸವ ಅನ್ವರ್, ವೆಂಕಟೇಶ ಗುಪ್ತ, ರಮೇಶ ಭಟ್ ಶಹಾಬಾದ್, ಸುನೀತಾ ಪಾಟೀಲ್ ಸಾವಳಗಿ, ಸರೋಜಾ ಆರ್.ವೈ. ಸೇರಿದಂತೆ ಕವನ ವಾಚಿಸಿದ ಪತ್ರಕರ್ತರೆಲ್ಲರೂ ಈ ನೆಲದ ಅನೇಕ ತಾಪತ್ರಯಗಳನ್ನು ಎತ್ತಿ ಹಿಡಿದರಲ್ಲದೆ ತಮ್ಮೊಳಗಿನ ತಳಮಳವನ್ನು ಕವನ ರೂಪದಲ್ಲಿ ಹೊರಹಾಕಿದರು.
ತುಡಿತ ಒಂದೇ ಆದರೂ ಭಿನ್ನ: ಸಾಹಿತ್ಯ ಸಮ್ಮೇಳನಗಳು, ಕವಿಗೋಷ್ಠಿಗಳಲ್ಲಿ ವರದಿಗಾಗಿ ಹೋಗಿ ಆ ಕವನ ಹೀಗಿತ್ತು, ಈ ಕವನ ಹಾಗಿತ್ತು ಎಂದು ಟೀಕೆ- ಟಿಪ್ಪಣಿ ಮಾಡುತ್ತಿದ್ದವರನ್ನೇ ಇದೀಗ ವೇದಿಕೆ ನೀಡಿ ಕವನ ವಾಚನಕ್ಕೆ ಆಹ್ವಾನಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಅಲ್ಲಿ ಸೇರಿದ್ದರು. ಅಲ್ಲದೆ, ಪತ್ರಕರ್ತರಾದವರು ಅದ್ಹೇಗೆ ಕವನ ಬರೆಯುತ್ತಾರೆ ಎಂಬುದನ್ನು ಕೇಳಿಯೇ ಬಿಡೋಣ ಎಂದು ಬಂದಿದ್ದರು.
ಗುಲ್ಬರ್ಗ ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕ ಎಂ.ಬಿ. ಪಾಟೀಲ್, ಸಾಹಿತಿ ಡಾ. ಸ್ವಾಮೀರಾವ ಕುಲಕರ್ಣಿ ತಮ್ಮ ಮಾತುಗಳಲ್ಲಿ ಕನ್ನಡ ಸಾಹಿತ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಬೆಳವಣಿಗೆಗಳನ್ನೆಲ್ಲ ಹಿನ್ನೆಲೆಯಾಗಿಟ್ಟುಕೊಂಡು ನೋಡಿದಾಗ ಪತ್ರಕರ್ತರನೇಕರು ಕವಿಗಳಾಗಿ ಹೊರಹೊಮ್ಮಿದ್ದಾರೆ. ಕವಿಗಳು, ಪತ್ರಕರ್ತರಲ್ಲಿ ತುಡಿತ ಒಂದೇ ಆಗಿರುತ್ತದೆಯಾದರೂ ಅದು ಆಯಾ ಸಂದರ್ಭದ ಹಿನ್ನೆಲೆಯಲ್ಲಿ ಭಿನ್ನವಾಗುತ್ತ ಹೋಗುತ್ತದೆ ಎಂದರು.
ವೈಯಕ್ತಿಕ ವಿಮರ್ಶೆ ಕಷ್ಟ: ಪತ್ರಕರ್ತರಲ್ಲಿನ ಕವಿ ಹೃದಯ ಅವರ ವರದಿಗಾರಿಕೆ ಇನ್ನೂ ಸಹೃದಯಕ್ಕೆ ಹತ್ತಿರವಾಗಿಸುತ್ತದೆ ಎಂದು ಹೇಳಿದರಲ್ಲದೆ, ಹೆಚ್ಚಿನ ಕಾವ್ಯ ಅಧ್ಯಯನದಿಂದ ಇಲ್ಲಿನ ಪತ್ರಕರ್ತರಲ್ಲಿಯೂ ಕೆಲವರು ಉತ್ತಮ ಕವಿಗಳಾಗಿ ಹೆಸರು ಮಾಡಲು ಸಾಧ್ಯ ಎಂದು ಹೇಳಿದರು.
ತಮ್ಮ ಮಾತಿನ ಒಂದು ಹಂತದಲ್ಲಿ ಡಾ. ಸ್ವಾಮೀರಾವ ಕುಲಕರ್ಣಿ, ಕವನ ಓದಿದವರು ಪತ್ರಕರ್ತರೇ ಇರುವದರಿಂದ ಯಾವ ಕವನ ಹೇಗೆಂಬ ವೈಯಕ್ತಿಕ ವಿಮರ್ಶೆ ತುಂಬ ಕಷ್ಟದ ಕೆಲಸ. ಆದ್ದರಿಂದ ತಮ್ಮ ವಿಮರ್ಶೆಗಿಂತ ನೀವೇ ಆ ಕೆಲಸ ಚೆನ್ನಾಗಿ ಮಾಡಲು ಸಾಧ್ಯ ಎಂದು ಹೇಳುವ ಮೂಲಕ ತಾವು ಓದಿದ ಕವನಗಳ ಮೌಲ್ಯ ಮಾಪನ ಹೊಣೆಗಾರಿಕೆ ಸೇರಿದ್ದ ಕವಿ ಪತ್ರಕರ್ತರ ಹೆಗಲಿಗೆ ತಗಲು ಹಾಕಿದರು.
ವಿಶ್ವಜ್ಯೋತಿ ಪ್ರತಿಷ್ಠಾನದ ವಿಜಯಕುಮಾರ ತೇಗಲತಿಪ್ಪಿ, ಜೈಕರವೇ ಅಧ್ಯಕ್ಷ ಅರುಣ ಪಾಟೀಲ್ ಮಾತನಾಡಿದರು. ಗಿರಿಮಲ್ಲ ನಿರೂಪಿಸಿದರು. ಗುಂಡಣ್ಣ ಡಿಗ್ಗಿ ವಂದಿಸಿದರು. ಜೈಕರವೇ ರಾಜ್ಯ ಉಪಾಧ್ಯಕ್ಷ ಮಂಜುನಾಥ ಹಾಗರಗಿ, ಪತ್ರಕರ್ತರ ಸಂಘದ ಅಧ್ಯಕ್ಷ ಬಾಬೂರಾವ ಯಡ್ರಾಮಿ ಹಾಜರಿದ್ದರು.
ಕವಿಗೋಷ್ಠಿ ಅಪರೂಪದ್ದು. ಇಲ್ಲಿ ವಾಚಿಸಲಾಗಿರುವ ಕವನಗಳ ಸಂಕಲನ ತರುವ ಅಗತ್ಯಲಿದೆ. ಡಾ. ಸ್ವಾಮೀರಾವ ಕುಲಕರ್ಣಿ ಅವರ ಸಿರಪುರ ಪ್ರಕಾಶನದಿಂದ ಪತ್ರಕರ್ತರ ಕವನಗಳ ಸಂಕಲನ ಹೊರತರುವ ಪ್ರಯತ್ನ ನಡೆಯಲಿದೆ ಎಂದು ಬಾಬೂರಾವ ಯಡ್ರಾಮಿ ಹೇಳಿದರು.