ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪುನರ್ವಸತಿ ಕಲ್ಪಿಸದ ಹೊರತು ಗೇಟ್ ಹಾಕಲು ಬಿಡಲ್ಲ

Mainashree
Updated On : 8 Jul 2013, 11:00 am

ಕ.ಪ್ರ.ವಾರ್ತೆ  ಯಾದಗಿರಿ  ಜು. 8
ಹಿನ್ನೀರಿನಲ್ಲಿ ಮುಳುಗಡೆಯಾಗುವ ಜಮೀನಿಗೆ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸದೇ ಸನ್ನತಿ ಬ್ಯಾರೇಜ್ ಗೇಟ್ ಹಾಕಿ ನೀರು ನಿಲ್ಲಿಸಲು ಬಿಡುವುದಿಲ್ಲ ಎಂದು ಬ್ಯಾರೇಜ್ ಹಿನ್ನೀರಿನಲ್ಲಿ ಮುಳುಗಡೆಯಾಗುವ ಹುರಸಗುಂಡಗಿ ಗ್ರಾಮಸ್ಥರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೂ.28ರಂದು 'ಕನ್ನಡಪ್ರಭ' ವರದಿ ಮಾಡಿದ್ದ 'ಭೀಮೆಗೆ ನೀರು ಬಂದರೆ ಇವರೋಡಬೇಕು' ಎಂಬ ವರದಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಅವರು ಸೋಮವಾರ ಕರೆದಿದ್ದ ಕೆಬಿಜೆಎನ್ನೆಲ್ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಹುರಸಗುಂಡಗಿ ಗ್ರಾಮಸ್ಥರು ಈ ಎಚ್ಚರಿಕೆ ನೀಡಿದರು.
ಮಾಜಿ ಎಂಎಲ್‌ಸಿ ಅಮಾತೆಪ್ಪ ಕಂದಕೂರ, ಹುರಸಗುಂಡಗಿ ಗ್ರಾಮಸ್ಥರಾದ ಸಿದ್ದನಗೌಡ ಪಾಟೀಲ, ವೀರಣ್ಣ ವಿಶ್ವಕರ್ಮ, ಮಲ್ಲಣ್ಣ ಇಟಗಿ ಇತರರು ಸಭೆಯಲ್ಲಿ ಮಾತನಾಡಿ, ಸನ್ನತಿ ಬ್ಯಾರೇಜ್ ನಿರ್ಮಾಣವಾಗಿ ಮೂರು ವರ್ಷಗಳೇ ಕಳೆದಿವೆ. ಆದರೆ ಇದುವರೆಗೆ ಪುನರ್ವಸತಿ ಕಲ್ಪಿಸಿಲ್ಲ. ಮಾರುಕಟ್ಟೆ ದರದಂತೆ ಶೀಘ್ರದಲ್ಲಿ ಪರಿಹಾರ ಕಲ್ಪಿಸಬೇಕು. ಅಲ್ಲದೇ ಪುನರ್ವಸತಿ ಪ್ರದೇಶದಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕು. ಅಲ್ಲಿಯವರೆಗೆ ನಾವು ಸ್ಥಳಾಂತರಗೊಳ್ಳುವುದಿಲ್ಲ. ಅಲ್ಲದೇ ಬ್ಯಾರೇಜ್‌ನಲ್ಲಿ ನೀರು ಸಂಗ್ರಹ ಮಾಡಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಸಂತ್ರಸ್ತರು ಸ್ಥಳಾಂತರಗೊಂಡಿಲ್ಲ: ಸನ್ನತಿ ಬ್ಯಾರೇಜಿನಿಂದ ಮುಳುಗಡೆಯಾಗುವ ಜಮೀನು, ಸಂತ್ರಸ್ತರ ಸಂಖ್ಯೆ, ಪುನರ್ವಸತಿಗೆ ಕೈಗೊಂಡ ಕ್ರಮ ಇತ್ಯಾದಿ ಮಾಹಿತಿ ನೀಡುವಂತೆ ಸಭೆಗೆ ಹಾಜರಾಗಿದ್ದ ಕೆಬಿಜೆಎನ್ನೆಲ್ ಭೀಮರಾಯನಗುಡಿ ವಿಶೇಷ ಭೂ ಸ್ವಾಧೀನಾಧಿಕಾರಿ ಶಂಕ್ರಣ್ಣ ವಣಿಕ್ಯಾಳ ಹಾಗೂ ಕಾರ್ಯನಿರ್ವಾಹಕ ಅಭಿಯಂತರ ಬಾಲಸಬ್ರಹ್ಮಣ್ಯ ಅವರಿಗೆ ಜಿಲ್ಲಾಧಿಕಾರಿ ಜಮಾದಾರ ಸೂಚಿಸಿದರು.
ಸನ್ನತಿ ಬ್ಯಾರೇಜ್ ಹಿನ್ನೀರು ಪ್ರದೇಶದಲ್ಲಿ 944 ಎಕರೆ ಜಮೀನು ಮುಳುಗಡೆಯಾಗುತ್ತದೆ. ಎಕರೆಗೆ 1.70 ಲಕ್ಷ ಪರಿಹಾರ ನಿಗದಿಪಡಿಸಲಾಗಿದೆ ಎಂದು ಕೆಬಿಜೆಎನ್ನೆಲ್ ಅಧಿಕಾರಿಗಳು ಮಾಹಿತಿ ನೀಡಿದರು. ಆಗ ಶಾಸಕ ಗುರು ಪಾಟೀಲ ಮಾತನಾಡಿ, ಪಕ್ಕದ ಫರಹತಾಬಾದ್‌ನಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಎಕರೆಗೆ 9 ಲಕ್ಷ ಪರಿಹಾರ ನೀಡಲಾಗಿದೆ. ಅದೇ ಭೀಮಾ ನದಿ ತೀರದಲ್ಲಿರುವ ಫಲವತ್ತಾದ ಕೃಷಿ ಜಮೀನಿಗೆ ಯಾಕೆ ಕಡಿಮೆ ಪರಿಹಾರ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ಕೃಷಿ ಜಮೀನು ಈಗ ಎಕರೆಗೆ 50 ಲಕ್ಷ ಕೊಟ್ಟರೂ ಸಿಗುತ್ತಿಲ್ಲ. ವರ್ಷದಲ್ಲಿ ಎರಡು ಬೆಳೆ ತೆಗೆಯುವ ಜಮೀನು ಮುಳುಗಡೆಯಾಗುತ್ತಿದ್ದು, ಹೆಚ್ಚಿನ ಪರಿಹಾರ ನಿಗದಿ ಮಾಡಬೇಕು. ರೈತರಿಗೆ ಶೀಘ್ರ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಪರಿಹಾರ ನಿಗದಿ ಮಾಡುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೆ ಬಾಗಲಕೋಟೆಯಲ್ಲಿ ಭೂಸ್ವಾಧೀನ ಕಚೇರಿಯಿದ್ದು, ಅಲ್ಲಿ ನೀಡುವ ನಿರ್ದೇಶನವನ್ನು ಪಾಲಿಸುವುದಾಗಿ ತಿಳಿಸಿದರು.

'ಕನ್ನಡಪ್ರಭ'ದಲ್ಲಿ ಪ್ರಕಟವಾದ ವರದಿಯಿಂದ ಸಮಸ್ಯೆ ಗಂಭೀರತೆ ಅರಿತು ಹುರಸಗುಂಡಗಿ ಗ್ರಾಮಕ್ಕೆ ಕಳೆದ ಶನಿವಾರ ಭೇಟಿ ನೀಡಿ ಬಂದಿದ್ದೇನೆ. ಭೀಮಾ ನದಿಗೆ ನೀರು ಬಂದರೆ ಬ್ಯಾರೇಜ್ ಹಿನ್ನೀರು ಪ್ರದೇಶದ ರೈತರು ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಜಿಲ್ಲಾಡಳಿತದಿಂದ ಸಭೆ ಕರೆಯಲಾಗಿದೆ. ಸಭೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವನ್ನು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಲಾಗುವುದು.
 ಎಫ್.ಆರ್. ಜಮಾದಾರ, ಯಾದಗಿರಿ ಜಿಲ್ಲಾಧಿಕಾರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement