ಪ್ರತಿಭಾನ್ವೇಷಣೆ ಪರೀಕ್ಷೆಗೆ 10 ಸಾವಿರ ಅರ್ಜಿ: ಪಲ್ಲವಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.8
ಎಸ್ಸೆಸ್ಸೆಲ್ಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವ ಹಾಗೂ ಅರ್ಹತೆ ಆಧರಿಸಿ ವಿದ್ಯಾರ್ಥಿ ವೇತನವನ್ನು ಒದಗಿಸುವ ಉದ್ದೇಶದ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಗೆ ಜಿಲ್ಲೆಯ 10 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ 100 ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಎಲ್ಲ ಶಾಲೆಗಳು ಪ್ರಯತ್ನಿಸಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ತಿಳಿಸಿದರು.
ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ವ ಶಿಕ್ಷಣ ಅಭಿಯಾನ ಗುಲ್ಬರ್ಗ ಸಂಯುಕ್ತ ಆಶ್ರಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಹಾಗೂ ಶಾಲಾ ಮಕ್ಕಳನ್ನು ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಗೆ ತರಬೇತುಗೊಳಿಸುವ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೆಚ್ಚುವರಿ ಅಧ್ಯಯನ ಮಾಡಿ: ಕಳೆದ ವರ್ಷ ಈ ಪರೀಕ್ಷೆಗೆ 1,400 ವಿದ್ಯಾರ್ಥಿಗಳು ಹಾಜರಾಗಿದ್ದು ಕೇವಲ 5 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಭಾಗವಹಿಸುವಂತೆ ಹಾಗೂ ಉತ್ತೀರ್ಣರಾಗವಂತಾಗಲು ಶಾಲೆಗಳಲ್ಲಿ ಪಠ್ಯದೊಂದಿಗೆ ಪ್ರತಿಭಾನ್ವೇಷಣೆ ಪರೀಕ್ಷೆಯ ಪೂರಕ ಅಭ್ಯಾಸ ಹೆಚ್ಚುವರಿಯಾಗಿ ಅಭ್ಯಸಿಸಬೇಕು. ವಿದ್ಯಾರ್ಥಿಗಳು ಕಳೆದ 5-10 ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು. ಅಣುಕು ಪರೀಕ್ಷೆಗಳನ್ನು ಕೈಗೊಂಡು ವಿದ್ಯಾರ್ಥಿಗಳಲ್ಲಿರುವ ಭಯವನ್ನು ಹೋಗಲಾಡಿಸಬೇಕು ಎಂದರು.
ಜು.15ರಿಂದ ತರಬೇತಿ: ಪ್ರತಿ ತಾಲೂಕಿನ 25 ಪ್ರೌಢಶಾಲೆ ಮಟ್ಟದಲ್ಲಿರುವ ವಿಜ್ಞಾನ, ಗಣಿತ, ಇಂಗ್ಲಿಷ್, ಸಮಾಜಶಾಸ್ತ್ರದ ಉತ್ತಮ ಶಿಕ್ಷಕರನ್ನು ಗುರುತಿಸಿದಲ್ಲಿ ಜುಲೈ ಕೊನೆಗೆ ಡಯಟ್‌ನಿಂದ ತರಬೇತಿ ನೀಡಲಾಗುವುದು. ಈ ಶಿಕ್ಷಕರು ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವರು. ಈ ನಿಟ್ಟಿನಲ್ಲಿ ಜು.10ರೊಳಗಾಗಿ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ಪಟ್ಟಿಯನ್ನು ನೀಡಿ ಜು.15ರಿಂದ ಅವರಿಗೆ ತರಬೇತಿ ನೀಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಡಯಟ್ ಪ್ರಾಂಶುಪಾಲ ಮೆಹರುನ್ನಿಸಾ ಬೇಗಂ, ಕಾರ್ಮಿಕ ಉಪ ಆಯುಕ್ತ, ಕಾರ್ಮಿಕ ಅಧಿಕಾರಿ, ಸರ್ವ ಶಿಕ್ಷಣ ಅಭಿಯಾನ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಪಿ.ಎಸ್. ಮುಧೋಳ ಇತರರು ಇದ್ದರು.