ಮುಂಗಾರು ಚುರುಕು; ಬಿತ್ತನೆ ಕಾರ್ಯ ಪ್ರಗತಿ
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಜು.8
ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಜೂನ್ ಮತ್ತು ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರು ತಮ್ಮ ಹೊಲದಲ್ಲಿ ಬಿತ್ತನೆ ಮತ್ತು ಹುಲ್ಲು ತೆಗೆದು ಹಾಕುವ(ಸೇದೆ) ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ತಾಲೂಕಿನಲ್ಲಿ ಕೃಷಿ ಇಲಾಖೆ ಮಾಹಿತಿ ಪ್ರಕಾರ ಶೇ.95ರಷ್ಟು ಬಿತ್ತನೆಯಾಗಿದ್ದು, ಅಲ್ಲಲ್ಲಿ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಕೆಲವು ಗ್ರಾಮಗಳಲ್ಲಿ ತೊಗರಿ ಮತ್ತು ಹೆಸರು, ಉದ್ದು ಬೆಳೆಗಳಲ್ಲಿ ಹುಲ್ಲು ತೆಗೆದು ಹಾಕುವ ಕೆಲಸ ಭರದಿಂದ ನಡೆಯುತ್ತಿವೆ.
ಏಕದಳ, ದ್ವಿದಳ: ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಬಿತ್ತನೆ ಗುರಿ 70,745 ಹೆಕ್ಟೇರ್ ಪ್ರದೇಶವಾಗಿದ್ದು, ಈಗಾಗಲೇ 67,225 ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಏಕದಳ ಬಿತ್ತನೆ ಗುರಿ-2190ರಲ್ಲಿ 1246 ಬಿತ್ತನೆಯಾಗಿದೆ.
ದ್ವಿದಳ ಧಾನ್ಯ ಬಿತ್ತನೆ ಗುರಿ 63829 ಇದ್ದು ಇದರಲ್ಲಿ 58,800 ಬಿತ್ತನೆಯಾಗಿದೆ. ಎಣ್ಣೆಕಾಳು ಬಿತ್ತನೆ ಗುರಿ 26, 730 ಇದ್ದು 5,343 ಬಿತ್ತನೆ ಆಗಿದೆ. ತಾಲೂಕಿನ ಮಳೆ ಮಾಪನ ಕೇಂದ್ರಗಳಾದ ಚಿಂಚೋಳಿ-231 ಮಿಮಿ, ಕುಂಚಾವರಂ-182 ಮಿಮೀ, ಚಿಮ್ಮನಚೋಡ- 177.2 ಮಿಮೀ, ಐನಾಪುರ 200.9 ಮಿಮೀ, ಕೋಡ್ಲಿ- 135.3 ಮಿಮಿ ಮತ್ತು ಸುಲೇಪೇಟ್- 211.6 ಮಿಮೀ ಮಳೆಯಾಗಿದೆ. ಜನವರಿ ತಿಂಗಳಿಂದ ಜುಲೈ ಮೊದಲ ವಾರದ ವರೆಗೆ ಉತ್ತಮ ಮಳೆಯಾಗಿದೆ. ಹೀಗಾಗಿ ತಾಲೂಕಿನಲ್ಲಿ ಮುಂಗಾರಿನ ಬೆಳೆಗಳಾದ ಹೆಸರು, ತೊಗರಿ, ಉದ್ದು, ಸಜ್ಜೆ, ಹೈಬ್ರೀಡ್ ಜೋಳ ಉತ್ತಮವಾಗಿವೆ.
ಉತ್ತಮ ಮಳೆ: ತಾಲೂಕಿನ ಐನಾಪುರ, ಚಿಮ್ಮನಚೋಡ, ಚಂದನಕೇರಾ, ಕನಕಪುರ, ಸಾಲೇಬೀರನಳ್ಳಿ, ನಾಗಾಇದಲಾಯಿ, ಹೊಡೇಬೀರನಳ್ಳಿ, ಕರಚಖೇಡ, ಅಣವಾರ, ಗಡಿಕೇಶ್ವರ, ನಿಡಗುಂದಾ, ಕೆರೋಳಿ, ಸುಲೇಪೇಟ್, ಮೋಘಾ, ರಾಣಾಪುರ, ಶಾದೀಪುರ, ವೆಂಕಟಾಪುರ, ರುಸ್ತಂಪುರ, ಹಲಚೇರಾ, ಕೊರವಿ, ರಟಕಲ್, ದೇಗಲಮಡಿ, ಐನೋಳ್ಳಿ, ಚೆಂಗಟಾ, ಮಿರಿಯಾಣ ಮುಂತಾದ ಪ್ರಮುಖ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರು ತುಂಬಾ ಖುಷಿಯಲ್ಲಿದ್ದಾರೆ.
ಕೋಡ್ಲಿ ವಲಯದಲ್ಲಿ ಅಲ್ಪ ಮಳೆಯಾಗುತ್ತಿರುವುದರಿಂದ ಬಿತ್ತನೆ ಕಾರ್ಯ ಚುರುಕಿನಿಂದ ನಡೆದಿಲ್ಲ. ಅಲ್ಲಲ್ಲಿ ಮಳೆಯಾಗುತ್ತಿರುವುದರಿಂದ ಬಿತ್ತನೆ ಕಾರ್ಯ ನಡೆಯುತ್ತಿದೆ. ತಾಲೂಕಿನ ರಾಣಾಪುರ, ಸಾಸರಗಾಂವ್, ಗಡಿಲಿಂಗದಳ್ಳಿ, ಭೂಯಾರ ಮುಂತಾದ ಗ್ರಾಮಗಳಲ್ಲಿ ಹೆಸರು, ಉದ್ದಿನ ಬೆಳೆಗಳು ಹೂವು ಬಿಡುವ ಹಂತಕ್ಕೆ ತಲುಪಿವೆ. ಹಲವು ಗ್ರಾಮಗಳಲ್ಲಿ ಮೊಗ್ಗಿನಿಂದ ಕೂಡಿವೆ. ಸದ್ಯ ತಾಲೂಕಿನಲ್ಲಿ ಬೆಳೆಗೆ ತಕ್ಕ ಮಳೆಯಾಗುತ್ತಿರುವುದರಿಂದ ರೈತರಿಗೆ ಸಂತಸವನ್ನುಂಟು ಮಾಡಿದೆ.