23ರಂದು ರಂಭಾಪುರಿಶ್ರೀ ಅಡ್ಡಪಲ್ಲಕ್ಕಿ ಉತ್ಸವ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.9
ಇಲ್ಲಿಯ ಮಕ್ತಂಪುರದ ಜಡೆಯ ಶಂಕರಲಿಂಗ ದೇವರ ನೂತನ ಬೆಳ್ಳಿ ಮೂರ್ತಿ ಪುನರ್ ಪ್ರತಿಷ್ಠಾಪನೆ ಹಾಗೂ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜು.23 ಹಾಗೂ 24ರಂದು ನಗರದ ಜಿಲ್ಲಾ ವೀರಶೈವ ಬಣಗಾರ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಇಲ್ಲಿಯ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಕಲ್ಯಾಣಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
10ರಿಂದ ದಾನಮ್ಮ ದೇವಿ ಪುರಾಣ: ಮೂರ್ತಿ ಪ್ರತಿಷ್ಠಾಪನೆ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವದ ಅಂಗವಾಗಿ ಜು.10ರಿಂದ 24ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನ ನಡೆಯಲಿದೆ.
ಹಾವೇರಿಯ ಪ್ರಭಯ್ಯ ಶಾಸ್ತ್ರಿಗಳು ಹಿರೇಮಠ ಪುರಾಣಿಕರಾಗಿ ಆಗಮಿಸಲಿದ್ದು, ಇವರಿಗೆ ಕಲ್ಲೂರ ದೇಸಾಯಿ, ಸಿದ್ದಣ್ಣ ಹೂಗಾರ ಸಂಗೀತ ಸಾಥ್ ನೀಡಲಿದ್ದಾರೆ. ಗುರುಬಸವ ಬ್ರಹನ್ಮಠದ ಶಿವಾನಂದ ಸ್ವಾಮೀಜಿ ಪುರಾಣ ಪ್ರವಚನ ಉದ್ಘಾಟಿಸುವರು.
23ರಂದು ಬೆಳಗ್ಗೆ 11ಕ್ಕೆ ಜಡೆಯ ಶಂಕರಲಿಂಗ ದೇವರ ನೂತನ ಬೆಳ್ಳಿ ಮೂರ್ತಿ ಹಾಗೂ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಮಕ್ತಂಪುರದ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಿಂದ ಮುಖ್ಯರಸ್ತೆಯ ಮೂಲಕ ದೇವಸ್ಥಾನದವರೆಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ 101 ಸುಮಂಗಲೆಯರಿಂದ ಕುಂಭ ಮೆರವಣಿಗೆಯೂ ನಡೆಯಲಿದೆ.
24ರಂದು ಬೆಳಗ್ಗೆ 7ಕ್ಕೆ ರಂಭಾಪುರಿ ಜಗದ್ಗುರುಗಳು ಹಾಗೂ ಹಾರಕೂಡ ಮಠದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯರಿಂದ ಮೂರ್ತಿ ಪ್ರತಿಷ್ಠಾಪನೆ, ನಂತರ ಶಿಲಾನ್ಯಾಸ, ಶ್ರೀಗಳ ಆಶೀರ್ವಚನ ನಡೆಯಲಿದೆ. ಬೆಳಗ್ಗೆ 11.15ಕ್ಕೆ ಪುರಾಣ ಮಂಗಳಗೊಳ್ಳಲಿದೆ.
ಸೋಮವಾರ ನಡೆದ ಸಭೆಯಲ್ಲಿ ಸಮಾಜದ ಉಪಾಧ್ಯಕ್ಷ ಆನಂದ ಎಸ್. ದಂಡೋತಿ, ಜಂಟಿ ಕಾರ್ಯದರ್ಶಿ ಶಂಕರ ವಿ. ಧನಶೆಟ್ಟಿ, ರವೀಂದ್ರಕುಮಾರ್ ಎಸ್. ಕಾಳಗಿ, ಮಹಾರುದ್ರ ಎಸ್. ಚೌಧರಿ, ಅಶೋಕ ಎಸ್. ಕಾಳಿಗ, ಬಸವರಾಜ ವಿ.ಹರಸೂರ, ರಾಜು ಡಿ. ಭೈರಾಮಡಗಿ, ಶಾಂತಪ್ಪ ವಿ. ಉಡಚಣ, ಚಂದ್ರಶೇಖರ ಧನಶೆಟ್ಟಿ, ಶಾಂತವೀರಪ್ಪ ಕಲ್ಯಾಣಿ, ಮಲ್ಲಿಕಾರ್ಜುನ ದೊಡ್ಡಕುಂಡಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.