ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೌನ್ಸೆಲಿಂಗ್; ಶಿಕ್ಷಕನಿಂದ ಗಲಾಟೆ

Lingaraj Badiger
Updated On : 10 Jul 2013, 11:04 am

ಗುಲ್ಬರ್ಗ: ಗುಲ್ಬರ್ಗದಲ್ಲಿ ನಡೆದಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯ ಕೌನ್ಸೆಲಿಂಗ್ ಸಭಾಂಗಣಕ್ಕೆ ನುಗ್ಗಿದ ಶಿಕ್ಷಕರೊಬ್ಬರು ವರ್ಗಾವಣೆಗೆ ಆಗ್ರಹಿಸಿ ಗಲಾಟೆ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದ್ದು, ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಟಿ. ಜಯರಾಂ ತಿಳಿಸಿದ್ದಾರೆ. ಅಫಜಲ್ಪುರ ತಾಲೂಕಿನ ಸ್ಟೇಷನ್ ಗಾಣಗಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಗುಂಡಯ್ಯ ಗುತ್ತೇದಾರ ಎಂಬುವವರು, ಸಂಜೆ ಬಂದು ಕೆಲ ಶಿಕ್ಷಕರ ವರ್ಗಾವಣೆ ಇಂತಹ ಕಡೆ ಆಗಬೇಕೆಂಬ ಬೇಡಿಕೆ ಇಟ್ಟು ಪಟ್ಟು ಹಿಡಿದರು. ಅದೆಲ್ಲ ಆಗೋಲ್ಲ, ನಿಯಮ ಮೀರಿ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಅಲ್ಲಿದ್ದ ಹಿರಿಯ ಅಧಿಕಾರಿಗಳು ಹೇಳಿದಾಗ, ಶಿಕ್ಷಕ ಸಿಟ್ಟಿನಿಂದ ಮಾತಾಡಿ ಶಾಸಕ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲ, ನೋಡಿ ಮುಂದೆ ಏನಾಗುತ್ತೆ ಎಂದು ಹೆದರಿಸಿ ಗಲಾಟೆ ಮಾಡಿ ಹೋದನೆಂದು ಅವರು ತಿಳಿಸಿದ್ದಾರೆ. ನಂತರ ಶಿಕ್ಷಕ ಯಾರೆಂಬುವುದು ಪತ್ತೆ ಹಚ್ಚಿದಾಗ ಗೊತ್ತಾಗಿದ್ದು, ತಕ್ಷಣವೇ ಅಫಜಲ್ಪುರ ಬಿಇಒ ಅವರನ್ನು ಸಂಪರ್ಕಿಸಿ ಆ ಶಿಕ್ಷಕನಿಗೆ ನೋಟಿಸ್ ನೀಡಲು ಆದೇಶಿಸಿದ್ದಾಗಿ ಟಿ. ಜಯರಾಂ ತಿಳಿಸಿದ್ದಾರೆ. ನೋಟಿಸ್‌ಗೆ ಉತ್ತರ ಬಂದ ಮೇಲೆ ಕ್ರಮ ಜರುಗಿಸುವುದಾಗಿ ಅವರು ತಿಳಿಸಿದ್ದಾರೆ.
ಇಂದು ಕೃಷಿ ದರ್ಶನ ಕಾರ್ಯಕ್ರಮ
ಗುಲ್ಬರ್ಗ: ಗುಲ್ಬರ್ಗ ದೂರದರ್ಶನ ಕೇಂದ್ರವು ಜು.10ರಂದು ಸಂಜೆ 5.30ರಿಂದ 6ರವರೆಗೆ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ರೈತ ಬಾಂಧವರಿಗಾಗಿ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದೆ. ಮುಂಗಾರು ಬೆಳೆಗಳ ಸಸ್ಯ ಸಂರಕ್ಷಣೆ ಕುರಿತು ಗುಲ್ಬರ್ಗ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ. ಕಾಂತರಾಜ್ ಮಾಹಿತಿ ನೀಡಲಿದ್ದಾರೆ. ಮಲಕಣ್ಣ ಸಿ. ಪಾಟೀಲ್ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ. ಕೆ.ಆರ್. ಶ್ರೀನಿವಾಸ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ. ದೂ. 220491, 220492 ಸಂಪರ್ಕಿಸಿ ರೈತರು ತಮ್ಮ ಪ್ರಶ್ನೆಗಳಿಗೆ ತಜ್ಞರಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಕೇಂದ್ರದ ಸಹಾಯಕ ನಿರ್ದೇಶಕ ಪಾಟೀಲ್ ತಿಳಿಸಿದ್ದಾರೆ.
ಪರಿವರ್ತಕ ಸ್ಥಳಾಂತರಕ್ಕೆ ಆಗ್ರಹ
ಗುಲ್ಬರ್ಗ: ವಾರ್ಡ್ ನಂ.54ರಲ್ಲಿ ಬರುವ ಕೋಟನೂರ(ಡಿ) ಬಡಾವಣೆಯ ಕೆಎಚ್‌ಬಿ ಕಾಲೋನಿಯಲ್ಲಿ ಚಾಲ್ತಿ ಇರುವ ವಿದ್ಯುತ್ ಪರಿವರ್ತಕ ಕೂಡಲೇ ಸ್ಥಳಾಂತರಿಸಬೇಕು ಎಂದು ಬಡಾವಣೆಯ ನಾಗರಿಕರು ಒತ್ತಾಯಿಸಿದ್ದಾರೆ. ಪರಿವರ್ತಕ ತೆರವುಗೊಳಿಸದೆ ಇರುವುದರಿಂದ ಈ ಸ್ಥಳದಲ್ಲಿ ದಟ್ಟವಾದ ಮುಳ್ಳಿನ ಗಿಡಗಳು ಬೆಳೆದು ಜನವಸತಿ ಪ್ರದೇಶದಲ್ಲಿ ಕೀಟಗಳಿಗೆ, ಸೊಳ್ಳೆಗಳಿಗೆ ಹಾಗೂ ಸರ್ಪಗಳಿಗೆ ಆಶ್ರಯ ತಾಣವಾಗಿದೆ. ವಿದ್ಯುತ್ ಪರಿವರ್ತಕವು ಮನೆಯ ಮುಂದೆ ಮತ್ತು ರಸ್ತೆಯ ಮೇಲೆ ಅಳವಡಿಸಲಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ನಾಗರಿಕರು ಕೂಡಲೇ ವಿದ್ಯುತ್ ಪರಿವರ್ತಕ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement