ಚರಂಡಿ ನೀರು ರಸ್ತೆ ಮೇಲೆ ನರ್ತನ!
ಗುಲ್ಬರ್ಗ/ಶಹಾಬಾದ್: ರಾವೂರ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯದಿಂದ ಚರಂಡಿಯಲ್ಲಿ ಕಸ ತುಂಬಿದ್ದು, ಕೊಳಚೆ ನೀರು ರಸ್ತೆಗೆ ಹರಿದು ಸಿಮೆಂಟ್ ರಸ್ತೆ ಕೊಳಚೆಯಿಂದ ಆವೃತ್ತವಾಗಿವೆ. ಗ್ರಾಮಸ್ಥರು ಇಂಥ ಕೊಳಚೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ.
ಗ್ರಾಮದ ವಾರ್ಡ್ 4-5ರ ವ್ಯಾಪ್ತಿಗೆ ಬರುವ ಶಿವಾಜಿನಗರ ಭಾಗದಲ್ಲಿ ಗ್ರಾಪಂ ನಿರ್ಲಕ್ಷ್ಯದಿಂದ ಸಿಸಿ ರಸ್ತೆ ಬದಿಯ ಚರಂಡಿಗಳು ಕಾಲ ಕಾಲಕ್ಕೆ ಸ್ವಚ್ಛಗೊಳಿಸದೆ ಇರುವುದರಿಂದ ಕಸದಿಂದ ತುಂಬಿಹೋಗಿವೆ. ಇದರಿಂದ ಚರಂಡಿಯಲ್ಲಿ ಹರಿಯುವ ನೀರು ರಸ್ತೆಗೆ ಹರಿಯುತ್ತಿರುವುದರಿಂದ ರಸ್ತೆ ಕೆಸರಾಗಿ ಮಾರ್ಪಟ್ಟಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಸಿಮೆಂಟಿನ ನೀರಿನ ಟ್ಯಾಂಕ್ ಇಡಲಾಗಿದ್ದು, ಅದಕ್ಕೆ ಕೇವಲ ಒಂದು ಬಾರಿ ಮಾತ್ರ ನೀರು ತುಂಬಲಾಗಿದ್ದು, ನಂತರ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕವಿಲ್ಲದೆ ಟ್ಯಾಂಕ್‌ಗೆ ನೀರು ಸರಬರಾಜು ಆಗುತ್ತಿಲ್ಲ ಎನ್ನುತ್ತಾರೆ ಗ್ರಾಮದ ಭೀಮರಾಯ ರಾಜೊಳ್ಳಿ, ಮಲ್ಲೇಶಪ್ಪ, ಬಾಬುರಾವ ಸೂರನ್.
ಬಯಲು ಶೌಚಾಲಯ: ವಾರ್ಡ್ 4-5ರ ಮಹಿಳೆಯರಿಗೆ ಬಳಸಲು ಒಂದು ಶೌಚಾಲಯ ನಿರ್ಮಿಸಲಾಗಿದ್ದು, ಅದನ್ನು ಸುತ್ತಲು ಐದಾರು ಅಡಿ ಎತ್ತರದ ಗೋಡೆ ಮಾತ್ರ ನಿರ್ಮಿಸಿದ್ದಾರೆ. ಅದರ ಮೇಲೆ ಯಾವುದೆ ಛಾವಣಿ ಇಲ್ಲದೆ ಇರುವುದರಿಂದ ಸುತ್ತಲು ದೊಡ್ಡ ಮನೆಗಳಿದ್ದು, ಮಹಿಳೆಯರು ಇಲ್ಲಿ ಬಹಿರ್ದೆಸೆಗೆ ಹೋಗಲು ಮುಜುಗರಪಡಬೇಕಾಗಿದೆ. ಈ ಸ್ಥಳಕ್ಕೂ ಹೋಗಲು ರಸ್ತೆ ಕೆಸರು ದಾಟಬೇಕಾಗಿದ್ದು, ಹಲವು ಬಾರಿ ಮಹಿಳೆಯರು, ಮಕ್ಕಳು ಜಾರಿಬಿದ್ದ ಉದಾಹರಣೆಗಳಿವೆ.
ಸಾಂಕ್ರಾಮಿಕ ರೋಗದ ಭೀತಿ- ಜೈಕರವೇ ಎಚ್ಚರಿಕೆ: ರಾವೂರ ಗ್ರಾಪಂ ವ್ಯಾಪ್ತಿಯ ಲಕ್ಷ್ಮೀಪುರ ವಾಡಿಯಲ್ಲಿ ಈಗಾಗಲೇ ಕಲುಷಿತ ನೀರು, ಕೊಳಚೆಯಿಂದ ಜನರು ವಾಂತಿ- ಭೇದಿಯಿಂದ ನರಳುತ್ತಿದ್ದಾರೆ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು, ಅದಕ್ಕೆ ಗ್ರಾಪಂ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಜವಾಬ್ದಾರರಾಗುತ್ತಾರೆಂದು ಜೈಕರವೇ ಅಧ್ಯಕ್ಷ ವೆಂಕಟೇಶ ಬೊಮ್ಮಣ್ಣ, ಯುವರಾಜ, ಶ್ರೀರಾಮ ರಾಠೋಡ, ವೆಂಕಟೇಶ ಸೇಡಂ, ಆಕಾಶ ಭೋವಿ ಎಚ್ಚರಿಸಿದ್ದಾರೆ.