ನಿರ್ವಹಣೆ ಕಾಣದ ಬಸ್ ತಂಗುದಾಣಗಳು
ಯಾದಗಿರಿ: ಗ್ರಾಮೀಣ ಭಾಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಬಸ್ ತಂಗುದಾಣಗಳು ನಿರ್ವಹಣೆಯಿಲ್ಲದೇ ಹಾಳು ಬೀಳುತ್ತಿವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಂಗುದಾಣಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕರವೇ ಗ್ರಾಮೀಣ ಘಟಕದ ಅಧ್ಯಕ್ಷ ಶಿವುಕುಮಾರ ಕೊಂಕಲ್ ಆಗ್ರಹಿಸಿದ್ದಾರೆ.
ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಅವುಗಳ ನಿರ್ವಹಣೆ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಂಡಿದೆ. ಆದರೆ ಅವುಗಳ ನಿರ್ವಹಣೆಯನ್ನು ಮರೆತಿರುವ ಇಲಾಖೆ ಅಧಿಕಾರಿಗಳಿಂದಾಗಿ ಇಂದು ಗ್ರಾಮಾಂತರ ಪ್ರದೇಶಗಳಲ್ಲಿರುವ ತಂಗುದಾಣಗಳು ಹಾಳಾಗುತ್ತಿವೆ ಎಂದು ಆರೋಪಿಸಿದ್ದಾರೆ.
ರಸ್ತೆ ಪಕ್ಕದಲ್ಲೇ ವಿಶ್ರಾಂತಿ: ಶಹಾಪುರ ತಾಲುಕಿನ ಗೊಂದೆನೂರ ಗ್ರಾಮದ ಕ್ರಾಸ್ ಹತ್ತಿರವಿರುವ ಬಸ್ ತಂಗುದಾಣದ ಸುತ್ತ ಜಾಲಿ ಗಿಡಗಳು ಬೆಳೆದಿವೆ. ಇದರಿಂದ ಪ್ರಯಾಣಿಕರು ಒಳಗೆ ಕುಳಿತುಕೊಳ್ಳಲು ಆಗದೆ ಗ್ರಾಮದಿಂದ ನಡೆದು ಬಂದ ಸಾರ್ವಜನಿಕರು ರಸ್ತೆಯ ಬದಿಯಲ್ಲಿ ಕುಳಿತುಕೊಂಡು ದಣಿವಾರಿಸಿಕೊಳ್ಳುವುದು ಅನಿವಾರ್ಯವಾಗಿದೆ. ಬಸ್ ಬರುವವರೆಗೆ ಬಿಸಿಲು ಮಳೆಯೆನ್ನದೇ ರಸ್ತೆ ಪಕ್ಕದಲ್ಲೇ ನಿಲ್ಲುವಂತಾಗಿದೆ. ಮಳೆಗಾಲ ಆರಂಭವಾಗಿರುವುದರಿಂದ ಗೊಂದೇನೂರು ಗ್ರಾಮದ ಗೇಟ್ ಹತ್ತಿರದ ತಂಗುದಾಣ ಹೊರತು ಪಡಿಸಿದರೆ, ಅಲ್ಲಿ ಬೇರೆ ಯಾವ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಮಳೆ ಬಂದರೆ ನೀರಿನಲ್ಲಿ ನೆನೆಯಬೇಕಾದ ಅನಿವಾರ್ಯತೆ ಗ್ರಾಮಸ್ಥರದ್ದಾಗಿದೆ. ಅಧಿಕಾರಿಗಳು ತಂಗುದಾಣಗಳ ಸುತ್ತ ಬೆಳೆದಿರುವ ಜಾಲಿ ಗಿಡಗಳನ್ನು ತೆಗೆಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಬ್ದುಲ್ ಖತಾಲಿ, ಅಜ್ಮೀರಬಾಷಾ ನೂರಬಾವಿ, ಅಬ್ದುಲ್ ಚಿಗಾನೂರ ಮತ್ತಿರರು ಆಗ್ರಹಿಸಿದ್ದಾರೆ.